ತಿರಂಗಾ ಯಾತ್ರೆ | ತ್ರಿವರ್ಣ ಧ್ವಜದಲ್ಲಿ ಮುಖ ಒರೆಸಿಕೊಂಡ ಬಿಜೆಪಿಯ ಶಾಸಕ!
ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ | PC : X/@rajasthanipapa
ಜೈಪುರ: ಗುರುವಾರ ಜೈಪುರದಲ್ಲಿ ನಡೆದ ತಿರಂಗಾ ಯಾತ್ರೆಯ ವೇಳೆ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ತ್ರಿವರ್ಣ ಧ್ವಜದಲ್ಲಿ ತಮ್ಮ ಮುಖ ಒರೆಸಿಕೊಳ್ಳುತ್ತಿರುವ ವೀಡಿಯೊ ವೈರಲ್ ಆಗಿದ್ದು, ಈ ಕೃತ್ಯವನ್ನು ಅಗೌರವಯುತ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದೆ.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ನಡೆದ ತಿರಂಗಾ ಪಾದಯಾತ್ರೆಯ ವೇಳೆ ಈ ಘಟನೆ ನಡೆದಿದೆ.
ಜೈಪುರ ನಗರದಲ್ಲಿನ ಜನನಿಬಿಡ ಮಾರುಕಟ್ಟೆಗಳು ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಈ ಪಾದಯಾತ್ರೆ ಹಾದು ಹೋಗುತ್ತಿದ್ದ ವೇಳೆ, ಹವಾಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ತ್ರಿವರ್ಣ ಧ್ವಜದಿಂದ ತಮ್ಮ ಮುಖವನ್ನು ಒರೆಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತ್ತು.
ತಕ್ಷಣವೇ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ, ರಾಷ್ಟ್ರೀಯ ಲಾಂಛನಗಳಿಗೆ ತೀರಾ ಅಗೌರವ ತೋರುತ್ತಿರುವ ಬಿಜೆಪಿ, ದೇಶಪ್ರೇಮವನ್ನು ರಾಜಕೀಕರಣಗೊಳಿಸುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಆದರೆ, ತಮ್ಮ ತಪ್ಪು ಅರಿವಾಗುತ್ತಿದ್ದಂತೆಯೆ, ಶಾಸಕ ಬಾಲಮುಕುಂದ್ ಆಚಾರ್ಯ ತತ್ ಕ್ಷಣವೇ ತಮ್ಮ ಮುಖವನ್ನು ಸಾಧಾರಣ ಬಟ್ಟೆಯಿಂದ ಒರೆಸಿಕೊಂಡಿರುವುದೂ ಈ ವೀಡಿಯೊದಲ್ಲಿ ಕಂಡು ಬಂದಿದೆ. ಆದರೆ, ಅಷ್ಟು ಹೊತ್ತಿಗೆ ಅವರ ಆ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ಹೋಗಿತ್ತು ಎಂದು ವರದಿಯಾಗಿದೆ.
ಈ ವೀಡಿಯೊ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, “ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ಧ್ವಜಕ್ಕೆ ಗೌರವ ತೋರಿಸುವ ಭಾಗವಾಗಿ ನಡೆದ ಪಾದ ಯಾತ್ರೆಯ ವೇಳೆ ಇಂತಹ ವರ್ತನೆ ತೋರಿರುವುದು ಸಂವೇದನಾರಹಿತ ಹಾಗೂ ಅಗೌರವಯುತವಾಗಿದೆ” ಎಂದು ತರಾಟೆಗೆ ತೆಗೆದುಕೊಂಡಿದೆ.
ಆದರೆ, ಈ ಕುರಿತು ಬಿಜೆಪಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.