×
Ad

ಬಿಹಾರ | ಉಪೇಂದ್ರ ಕುಶ್ವಾಹರ ಮಗ ಶಾಸಕನಲ್ಲದಿದ್ದರೂ ಸಚಿವ ಸ್ಥಾನ; ʼಕುಟುಂಬ ರಾಜಕಾರಣʼ ಎಂದು ಬಿಜೆಪಿ ಮಿತ್ರಪಕ್ಷ RLM ನ 7 ನಾಯಕರು ರಾಜೀನಾಮೆ

Update: 2025-11-27 20:34 IST

ಉಪೇಂದ್ರ ಕುಶ್ವಾಹ | Photo Credit : indianexpress.com

ಪಾಟ್ನಾ: ಶಾಸಕ ಅಥವಾ ಎಂಎಲ್‌ಸಿ ಅಲ್ಲದ ಮಗ ದೀಪಕ್ ಪ್ರಕಾಶ್ ಅವರಿಗೆ ಸಚಿವ ಸ್ಥಾನ ಕೊಡಿಸಿದ್ದಕ್ಕೆ ಉಪೇಂದ್ರ ಕುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕ ಮೋರ್ಚಾ (RLM) ಪಕ್ಷದ 7 ಪ್ರಮುಖ ನಾಯಕರು ಗುರುವಾರ ರಾಜೀನಾಮೆ ಸಲ್ಲಿಸಿ, ಕುಶ್ವಾಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜೀನಾಮೆ ನೀಡಿರುವವರಲ್ಲಿ ರಾಜ್ಯಾಧ್ಯಕ್ಷ ಮಹೇಂದ್ರ ಕುಶ್ವಾಹ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ರಾಹುಲ್ ಕುಮಾರ್, ರಾಜೇಶ್ ರಂಜನ್ ಸಿಂಗ್, ಬಿಪಿನ್ ಕುಮಾರ್ ಚೌರಾಸಿಯಾ, ಪ್ರಮೋದ್ ಯಾದವ್ ಹಾಗೂ ಶೇಖ್‌ಪುರ ಜಿಲ್ಲಾ ಅಧ್ಯಕ್ಷ ಪಪ್ಪು ಮಂಡಲ್ ಸೇರಿದ್ದಾರೆ.

RLMನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಜಿತೇಂದ್ರ ನಾಥ್, “9 ವರ್ಷಗಳಿಂದ ಕುಶ್ವಾಹ ಅವರ ಜೊತೆ ಇದ್ದಿದ್ದೇನೆ. ಅವರ ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಒಂದು ಕಾಲದಲ್ಲಿ ತಮ್ಮನ್ನು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿ ಎಂದು ಭಾವಿಸಿದ್ದ ವ್ಯಕ್ತಿ 2020 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ತಮ್ಮ ಪಕ್ಷದ (ಆಗ ರಾಷ್ಟ್ರೀಯ ಲೋಕ ಸಮತಾ ಪಕ್ಷ) ಭವಿಷ್ಯದ ಬಗ್ಗೆ ಖಚಿತವಿರಲಿಲ್ಲ. ಅವರು ಪಕ್ಷದ ಭವಿಷ್ಯಕ್ಕಿಂತ ಕುಟುಂಬದ ಭವಿಷ್ಯವನ್ನೇ ಪ್ರಮುಖವಾಗಿಸಿಕೊಂಡಿದ್ದಾರೆ. ಶಾಸಕರಲ್ಲದ ಅವರ ಮಗ ಸಚಿವವಾಗುವುದು ಅದಕ್ಕೆ ಸಾಕ್ಷಿ,” ಎಂದು ಅವರು ಆರೋಪಿಸಿದ್ದಾರೆ. ಪಕ್ಷದ ಎರಡನೇ ಪ್ರಮುಖ ನಾಯಕ ಎಂದೇ ಗುರತಿಸಿಕೊಂಡಿದ್ದ, ಶೇಖ್‌ಪುರ ಕ್ಷೇತ್ರದ ಟಿಕೆಟ್ ನಿರೀಕ್ಷಿಸಿದ್ದ ಜಿತೇಂದ್ರ ನಾಥ್, ಆ ಕ್ಷೇತ್ರವು ಜೆಡಿ (ಯು)ಗೆ ಹೋದಾಗಲೇ ಅಸಮಾಧಾನಗೊಂಡಿದ್ದರು.

ರಾಜ್ಯಾಧ್ಯಕ್ಷ ಮಹೇಂದ್ರ ಕುಶ್ವಾಹ ಅವರು ಉಪೇಂದ್ರ ಕುಶ್ವಾಹ ಅವರನ್ನು “ಸಮಾಜವಾದಿ ರಾಜಕೀಯದ ಪತನಗೊಂಡ ಆಧಾರಸ್ತಂಭ” ಎಂದು ಉಲ್ಲೇಖಿಸಿ “ನೈತಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದವರು ಈಗ ಅದನ್ನೇ ಪಾಲಿಸದ ಸ್ಥಿತಿಗೆ ಬಂದಿದ್ದಾರೆ,” ಎಂದು ಕಟುವಾಗಿ ಟೀಕಿಸಿದ್ದಾರೆ.

ಪಕ್ಷದಿಂದ ಹೊರನಡೆದ ಇನ್ನೋರ್ವ ನಾಯಕ ರಾಹುಲ್ ಕುಮಾರ್ , “ಇದು ಅಂತ್ಯಗೊಂಡ ಏಕಪಕ್ಷೀಯ ಸಂಬಂಧ. ಕುಟುಂಬ ರಾಜಕಾರಣ ನಡೆಸುವ ಇತರ ನಾಯಕರಿಗಿಂತ ಕುಶ್ವಾಹ ಈಗ ಭಿನ್ನರಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷದಲ್ಲಿ ಸ್ಥಳವಿಲ್ಲ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪೇಂದ್ರ ಕುಶ್ವಾಹ ಕುಟುಂಬದ ಪ್ರಾಬಲ್ಯ ಈಗಾಗಲೇ ಪಕ್ಷದಲ್ಲಿ ಹೆಚ್ಚಾಗಿದೆ. ಅವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರ ಪತ್ನಿ ಸ್ನೇಹಲತಾ ಕುಶ್ವಾಹ ಸಸಾರಾಮ್ ಕ್ಷೇತ್ರದ ಶಾಸಕಿಯಾಗಿದ್ದಾರೆ. ಇದೀಗ ಪುತ್ರ ದೀಪಕ್ ಪ್ರಕಾಶ್ ಕೂಡ ಸಚಿವರಾಗಿದ್ದಾರೆ.

ಇತ್ತ, ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಆರು ಸ್ಥಾನಗಳಲ್ಲಿ ಸ್ಪರ್ಧಿಸಿ ನಾಲ್ಕರಲ್ಲಿ ಗೆದ್ದಿತ್ತು. ಸರ್ಕಾರ ರಚನೆಯ ನಂತರ RLMಗೆ ಒಂದೇ ಸಚಿವ ಸ್ಥಾನ ಸಿಕ್ಕಿತ್ತು. ಈಗ ಅದೇ ಸ್ಥಾನ ಪಕ್ಷದಲ್ಲಿ ಭಾರಿ ಬಿರುಕು ಮೂಡಿಸಿದೆ.

ಪಕ್ಷದ ಕಾರ್ಯಕರ್ತರಿಗೆ ಮೌಲ್ಯಕೊಡದೆ, ಕುಟುಂಬಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿ RLM ಪಕ್ಷದಲ್ಲಿ ಬಂಡಾಯದ ಅಲೆ ಬೀಸಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News