ನನ್ನಲ್ಲಿ ದೇಶಪ್ರೇಮಿಗಳ ರಕ್ತವಿದೆ, ನಿನ್ನಲ್ಲಿ ಬ್ರಿಟಿಷರ ಸೇವಕರ ರಕ್ತವಿದೆ!
Photo Credit: PTI
ಮುಂಬೈ: ಇತ್ತೀಚೆಗೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಶತಕವು ಕ್ರಿಕೆಟ್ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ರವಿವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತವು ತನ್ನ ಸೆಮಿಫೈನಲ್ ಸ್ಥಾನವನ್ನು ಭದ್ರಗೊಳಿಸಿದೆ.
ದುಬೈಯಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ತನ್ನ 51ನೇ ಏಕದಿನ ಶತಕವನ್ನು ಬಾರಿಸಿದರು ಹಾಗೂ ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು.
ಹಲವು ಖ್ಯಾತನಾಮ ವ್ಯಕ್ತಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತದ ನಿರ್ವಹಣೆ ಮತ್ತು ಕೊಹ್ಲಿಯ ಬ್ಯಾಟಿಂಗ್ ವೈಭವವನ್ನು ಶ್ಲಾಘಿಸಿದರು. ಪಂದ್ಯದಲ್ಲಿ ಕೊಹ್ಲಿಯ ನಿರ್ವಹಣೆಯನ್ನು ಶ್ಲಾಘಿಸಿದವರಲ್ಲಿ ಗೀತರಚನೆಕಾರ ಹಾಗೂ ಚಿತ್ರಕತೆ ಲೇಖಕ ಜಾವೇದ್ ಅಖ್ತರ್ ಕೂಡಾ ಒಬ್ಬರು.
ಎಲ್ಲಾ ಭಾರತೀಯರಂತೆ, ಜಾವೇದ್ ಅಖ್ತರ್ ಕೂಡ ಕೊಹ್ಲಿಯ ಪರಿಪೂರ್ಣ ನಿರ್ವಹಣೆಗೆ ಮನಸೋತರು. ಆದರೆ, ಅವರು ಮಾತ್ರ ನಿಂದಕರ (ಟ್ರೋಲ್ ಗಳು) ದಾಳಿಗೆ ಗುರಿಯಾದರು.
‘‘ವಿರಾಟ್ ಕೊಹ್ಲಿ ಜಿಂದಾಬಾದ್!!! ನಾವೆಲ್ಲರೂ ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆಪಟ್ಟುಕೊಳ್ಳುತ್ತೇವೆ!’’ ಎಂಬುದಾಗಿ 80 ವರ್ಷದ ಅಖ್ತರ್ ಎಕ್ಸ್‌ನಲ್ಲಿ ಬರೆದರು.
ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಓರ್ವ ನಿಂದಕ, ‘‘ಇಂದು ಸೂರ್ಯ ಎಲ್ಲಿಂದ ಉದಯಿಸಿದನು? ಆದರೂ, ನಿಮಗೆ ಒಳಗಿನಿಂದ ನೋವಾಗಿರಬೇಕು’’ ಎಂಬುದಾಗಿ ಬರೆದನು.
ಅದಕ್ಕೆ ತಿರುಗೇಟು ನೀಡಿದ ಅಖ್ತರ್ ಹೀಗೆ ಬರೆದರು: ‘‘ಮಗ, ನಿನ್ನ ತಂದೆ ಮತ್ತು ಅಜ್ಜ ಬ್ರಿಟಿಷರ ಬೂಟುಗಳನ್ನು ನೆಕ್ಕುತ್ತಿದ್ದಾಗ ನನ್ನ ತಂದೆ ಮತ್ತು ಅಜ್ಜ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಮತ್ತು ಕಾಲಾಪಾನಿಯಲ್ಲಿದ್ದರು. ನನ್ನ ದೇಹದಲ್ಲಿ ದೇಶಪ್ರೇಮಿಗಳ ರಕ್ತ ಹರಿಯುತ್ತಿದೆ ಮತ್ತು ನಿನ್ನ ದೇಹದಲ್ಲಿ ಬ್ರಿಟಿಶರ ಸೇವಕರ ರಕ್ತವಿದೆ. ಈ ವ್ಯತ್ಯಾಸವನ್ನು ಮರೆಯಬೇಡ’’.
ಮತ್ತೆ ಹಲವು ನಿಂದಕರು ಮುಗಿಬೀಳುತ್ತಿದ್ದಂತೆಯೇ, ಇನ್ನೊಮ್ಮೆ ಚಾಟಿ ಬೀಸಿದ ಅಖ್ತರ್, ‘‘ನಾನು ಇಷ್ಟೇ ಹೇಳಲು ಬಯಸುತ್ತೇನೆ- ನೀನೊಬ್ಬ ನೀಚ ಮನುಷ್ಯ ಮತ್ತು ನೀಚನಾಗಿಯೇ ಸಾಯುವವನು. ದೇಶಪ್ರೇಮ ಏನು ಎನ್ನುವುದು ನಿನಗೆ ಏನು ಗೊತ್ತು!’’ ಎಂಬುದಾಗಿ ಬರೆದರು.