ಮಧ್ಯಪ್ರದೇಶ | ಭೋಪಾಲ್ ಏಮ್ಸ್ ಆಸ್ಪತ್ರೆಯಿಂದ ರಕ್ತ, ಪ್ಲಾಸ್ಮಾ ಕಳವು : ತನಿಖೆಗೆ ಆದೇಶ
Credit : freepik.com
ಭೋಪಾಲ್: ಭೋಪಾಲ್‌ನಲ್ಲಿನ ಪ್ರತಿಷ್ಠಿತ ಅಖಿಲ ಭಾರತೀಯ ವೈದ್ಯಕೀಯ ಸಂಸ್ಥೆ(AIIMS)ಯ ರಕ್ತ ನಿಧಿ ಕೇಂದ್ರದಿಂದ ಹಲವು ಯೂನಿಟ್ ರಕ್ತ ಮತ್ತು ಪ್ಲಾಸ್ಮಾವನ್ನು ಕಳವು ಮಾಡಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬುಧವಾರ ಹೊರ ಗುತ್ತಿಗೆ ನೌಕರನೊಬ್ಬನ ವಿರುದ್ಧ ಏಮ್ಸ್ ರಕ್ತ ನಿಧಿ ಕೇಂದ್ರದ ಮೇಲ್ವಿಚಾರಕ ಡಾ. ಗ್ಯಾನೇಂದ್ರ ಪ್ರಸಾದ್ ನೀಡಿರುವ ದೂರನ್ನು ಆಧರಿಸಿ, ಬಾಘ್ ಸೆವಾನಿಯಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಎಫ್ಐಆರ್ ದಾಖಲಾಗಿದೆ.
ರಕ್ತ ನಿಧಿ ಕೇಂದ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಮತ್ತು ಪ್ಲಾಸ್ಮಾ ಕಾಣೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ದೂರಿನನ್ವಯ ಹೊರ ಗುತ್ತಿಗೆ ನೌಕರನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತನಿಖೆಯ ಭಾಗವಾಗಿ ಆಸ್ಪತ್ರೆಯ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಏಮ್ಸ್ ಆಡಳಿತ ಮಂಡಳಿಯನ್ನು ಕೋರಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಮಿಸ್ರೋಡ್ ಪ್ರದೇಶ) ರಜನೀಶ್ ಕಶ್ಯಪ್ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಒಂದೆರಡು ದಿನಗಳ ಹಿಂದೆ ಕೆಲ ಯೂನಿಟ್‌ಗಳಷ್ಟು ಪ್ಲಾಸ್ಮಾವನ್ನು ಕಳ್ಳತನ ಮಾಡಿ ಅಪರಿಚಿತ ವ್ಯಕ್ತಿಯೊಬ್ಬರಿಗೆ ಹಸ್ತಾಂತರಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.