×
Ad

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 13 ವರ್ಷಗಳಿಂದ ನಿಂತಿದ್ದ ಬೋಯಿಂಗ್ ವಿಮಾನ ತೆರವು; ಬೆಂಗಳೂರಿಗೆ ಸಾಗಾಟ

ಇದು ನಮಗೆ ಸೇರಿದ್ದು ಎಂದು ತಿಳಿದಿರಲಿಲ್ಲ ಎಂದ ಏರ್ ಇಂಡಿಯಾ!

Update: 2025-11-25 11:25 IST

PC: x.com/Aviationa2z

ಕೊಲ್ಕತ್ತಾ: ಕೊಲ್ಕತ್ತಾ ವಿಮಾನ ನಿಲ್ದಾಣದ ಆಗ್ನೇಯ ಅಂಚಿನಲ್ಲಿ 13 ವರ್ಷಗಳಿಂದ ನಿಷ್ಕ್ರಿಯವಾಗಿ ನಿಂತಿದ್ದ ಬೋಯಿಂಗ್ 737-200 ವಿಮಾನವನ್ನು ನ.14ರಂದು ಕೊನೆಗೂ ತೆರವುಗೊಳಿಸಲಾಯಿತು. ಟ್ರ್ಯಾಕ್ಟರ್–ಟ್ರೇಲರ್ ಮೂಲಕ ವಿಮಾನವನ್ನು ಬೆಂಗಳೂರಿಗೆ ಕಳುಹಿಸಲಾಗಿದ್ದು, ಅಲ್ಲಿ ಅದನ್ನು ನಿರ್ವಹಣಾ ಎಂಜಿನಿಯರ್‌ಗಳ ತರಬೇತಿಗೆ ಬಳಸಲಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ವಿಮಾನ ನಿಲ್ದಾಣದಿಂದ ತೆರವುಗೊಂಡ 14ನೇ ನಿಷ್ಕ್ರಿಯ ವಿಮಾನ ಇದು.

ಈ ವಿಮಾನದ ತೆರವು ಕ್ರಮವು ಎರಡು ಕಾರಣಗಳಿಂದ ಗಮನ ಸೆಳೆಯಿತು. ಮೊದಲನೆಯದಾಗಿ, 43 ವರ್ಷ ಹಳೆಯ ಈ ವಿಮಾನವು ಏರ್ ಇಂಡಿಯಾ ಸ್ವಾಮ್ಯದ್ದು ಎಂದು ಸ್ವತಃ ಏರ್‌ ಇಂಡಿಯಾಗೆ ತಿಳಿದಿರಲಿಲ್ಲ. ಎರಡನೆಯದಾಗಿ, ವಿಮಾನವನ್ನು ಅದರ ಪ್ರಾಟ್ & ವಿಟ್ನಿ ಎಂಜಿನ್‌ ಗಳ ಸಮೇತ ಮಾರಾಟ ಮಾಡಲಾಗಿದ್ದು, ಇದುವರೆಗೆ ಎಂಜಿನ್‌ ಗಳಿಲ್ಲದೇ ವಿಲೇವಾರಿ ಮಾಡಲಾಗಿದ್ದ ಇತರ AI ವಿಮಾನಗಳಿಗಿಂತ ಇದು ವಿಭಿನ್ನವಾಗಿದೆ.

ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಕಂಪೆನಿಯ ಸಿಬ್ಬಂದಿಗೆ ಕಳುಹಿಸಿದ ಆಂತರಿಕ ಟಿಪ್ಪಣಿಯಲ್ಲಿ, “ಈ ವಿಮಾನ ನಮ್ಮದು ಎಂಬುದೇ ನಮಗೆ ತಿಳಿದಿರಲಿಲ್ಲ! ಖಾಸಗೀಕರಣದ ವೇಳೆ ವಿಮಾನದ ದಾಖಲೆಗಳು ಲೆಡ್ಜರ್‌ ಗಳಲ್ಲಿ ಕಾಣೆಯಾಗಿದ್ದವು,” ಎಂದು ತಿಳಿಸಿದ್ದಾರೆ.

1982ರಲ್ಲಿ ಇಂಡಿಯನ್ ಏರ್‌ಲೈನ್ಸ್ ಗೆ ಸೇರಿದ್ದ VT-EHH ನೋಂದಣಿಯ ಬೋಯಿಂಗ್ 737-200, 1998ರಲ್ಲಿ ಅಲೈಯನ್ಸ್ ಏರ್‌ ಗೆ ಗುತ್ತಿಗೆಯಾಗಿ ಹಾರಾಟ ಮುಂದುವರಿಸಿತು. 2007ರಲ್ಲಿ ಇಂಡಿಯನ್ ಏರ್‌ಲೈನ್ಸ್‌ಗೆ ಮರಳಿದ ನಂತರ ಇದನ್ನು ಸರಕು ವಿಮಾನವಾಗಿ ಬಳಸಲಾಯಿತು. ಅದೇ ವರ್ಷ ಏರ್ ಇಂಡಿಯಾ–ಇಂಡಿಯನ್ ಏರ್‌ಲೈನ್ಸ್ ವಿಲೀನದೊಂದಿಗೆ AIಗೆ ಸೇರಿತು. ಬಳಿಕ ಇಂಡಿಯಾ ಪೋಸ್ಟ್ ಸೇವೆಯಲ್ಲಿ ಬಳಕೆಯಾದ ವಿಮಾನವನ್ನು 2012ರಲ್ಲಿ ಸೇವೆಯಿಂದ ಹಿಂಪಡೆಯಲಾಯಿತು. ಅಂದಿನಿಂದಲೇ ಇದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿತ್ತು. ಈ ಅವಧಿಯಲ್ಲಿ ವಿಮಾನ ನಿಲ್ದಾಣವು, ಪಾರ್ಕಿಂಗ್ ಶುಲ್ಕವಾಗಿ ಏರ್ ಇಂಡಿಯಾದಿಂದ ಸುಮಾರು 1 ಕೋಟಿ ರೂಪಾಯಿ ವಸೂಲಿ ಮಾಡಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (BIAL) ತನ್ನ MRO ಕೇಂದ್ರದಲ್ಲಿ ತರಬೇತಿ ಉದ್ದೇಶಕ್ಕೆ ವಿಮಾನವನ್ನು ಖರೀದಿಸಿದೆ. ಇತರೆ ವಿಲೇವಾರಿ ವಿಮಾನಗಳಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಫ್ಯೂಸ್‌ ಲೇಜ್‌ ಅನ್ನು ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸಿವೆ ಎಂದು ತಿಳಿದು ಬಂದಿದೆ.

ಐತಿಹಾಸಿಕ ಮಹತ್ವ ಪಡೆದ, 1947ರಲ್ಲಿ ಬಿಜು ಪಟ್ನಾಯಕ್ ಇಂಡೋನೇಷ್ಯಾ ನಾಯಕರನ್ನು ರಕ್ಷಿಸಲು ಸ್ವತಃ ಚಲಾಯಿಸಿದ್ದ ಡೌಗ್ಲಸ್ DC-3 ಡಕೋಟಾ ವಿಮಾನವನ್ನು ಏರ್ಪೋರ್ಟ್ ನಿಂದ ತೆರವುಗೊಳಿಸಿ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಪ್ರಸ್ತುತ, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸದ ವಿಮಾನಗಳು ಅಲೈಯನ್ಸ್ ಏರ್‌ ನ ಎರಡು ATR ವಿಮಾನಗಳಷ್ಟೆ ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News