Australia | ಬೊಂಡಿ ಬೀಚ್ ನಲ್ಲಿ ಶೂಟೌಟ್; ಬಂದೂಕುಧಾರಿಗಳು ಹೈದರಾಬಾದ್ ಮೂಲದವರು : ಪೊಲೀಸರು
Photo: AP/PTI
ಹೈದರಾಬಾದ್, ಡಿ. 16: ಆಸ್ಟ್ರೇಲಿಯದ ಬೊಂಡಿ ಬೀಚ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಶೂಟರ್ಗಳ ಪೈಕಿ ಒಬ್ಬನಾಗಿರುವ ಸಾಜಿದ್ ಅಕ್ರಮ್ ಹೈದರಾಬಾದ್ ನವನು ಎಂದು ತೆಲಂಗಾಣ ಪೊಲೀಸರು ಖಚಿತಪಡಿಸಿದ್ದಾರೆ.
ಐವತ್ತು ವರ್ಷ ಪ್ರಾಯದ ಸಾಜಿದ್ ಅಕ್ರಮ್ ಹೈದರಾಬಾದ್ ನಲ್ಲಿ ಬಿ.ಕಾಮ್ ಪದವಿ ಪಡೆದು, ಐರೋಪ್ಯ ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿ 1998 ನವೆಂಬರ್ನಲ್ಲಿ ಆಸ್ಟ್ರೇಲಿಯಕ್ಕೆ ವಲಸೆ ಹೋಗಿದ್ದನು ಎಂದು ತೆಲಂಗಾಣ ಪೊಲೀಸ್ ಮಹಾ ನಿರ್ದೇಶಕ ಬಿ. ಶಿವಧರ ರೆಡ್ಡಿ ಹೇಳಿದ್ದಾರೆ.
ಆಸ್ಟ್ರೇಲಿಯಕ್ಕೆ ವಲಸೆ ಹೋದ ಬಳಿಕ, ಸಾಜಿದ್ ಆರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾನೆ ಎಂದು ಗೊತ್ತಾಗಿದೆ.
‘‘1998ರಲ್ಲಿ ಆಸ್ಟ್ರೇಲಿಯಕ್ಕೆ ವಲಸೆ ಹೋಗುವ ಮೊದಲು, ಭಾರತದಲ್ಲಿದ್ದಾಗ ಸಾಜಿದ್ ಅಕ್ರಮ್ ವಿರುದ್ಧದ ಯಾವುದೇ ವ್ಯತಿರಿಕ್ತ ದಾಖಲೆ ಪೊಲೀಸರಲ್ಲಿಲ್ಲ. ಕೇಂದ್ರೀಯ ಸಂಸ್ಥೆಗಳು ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಸಹಕಾರ ನೀಡಲು ತೆಲಂಗಾಣ ಪೊಲೀಸರು ಬದ್ಧರಾಗಿದ್ದಾರೆ’’ ಎಂದು ರೆಡ್ಡಿ ಹೇಳಿದರು.
ಸಾಜಿದ್ ಅಕ್ರಮ್ನನ್ನು ಭಯೋತ್ಪಾದಕನಾಗಿ ಪರಿವರ್ತಿಸಿದ ವಿಷಯಗಳೊಂದಿಗೆ ಭಾರತಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು. ಈ ನಡುವೆ, ಅಕ್ರಮ್ ಮತ್ತು ಅವನ ಮಗ ನವೀದ್ ನವೆಂಬರ್ ಒಂದರಂದು ಸಿಡ್ನಿಯಿಂದ ಫಿಲಿಪ್ಪೀನ್ಸ್ ಗೆ ಜೊತೆಯಾಗಿ ಬಂದರು ಎಂದು ಫಿಲಿಪ್ಪೀನ್ಸ್ ವಲಸೆ ಸಂಸ್ಥೆಯ ವಕ್ತಾರೆ ಡಾನಾ ಸ್ಯಾಂಡೋವಲ್ ತಿಳಿಸಿದ್ದಾರೆ. ಅವರು ನವೆಂಬರ್ 28ರಂದು ಫಿಲಿಪ್ಪೀನ್ಸ್ ತೊರೆದಿದ್ದು, ಮನಿಲಾ ಮೂಲಕ ಸಿಡ್ನಿಗೆ ಪ್ರಯಾಣಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಡ್ನಿಯ ಬೊಂಡಿ ಬೀಚ್ನಲ್ಲಿ ರವಿವಾರ ‘ಹನುಕ್ಕಾ’ ಆಚರಣೆಯ ವೇಳೆ ನಡೆದ ಭಯೋತ್ಪಾದಕ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಹನುಕ್ಕಾ ಎನ್ನುವುದು ಯಹೂದಿಗಳು ಒಟ್ಟು ಸೇರುವ ಹಬ್ಬವಾಗಿದೆ. ಭಯೋತ್ಪಾದಕ ದಾಳಿ ನಡೆಸಿದ ಇಬ್ಬರು ಬಂದೂಕುಧಾರಿಗಳನ್ನು ಅಕ್ರಮ್ ಮತ್ತು ಅವನ ಮಗ ನವೀದ್ ಎಂಬುದಾಗಿ ಗುರುತಿಸಲಾಗಿದೆ.