ಬಜೆಟ್ 2025: ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಶೇ.100ಕ್ಕೇರಿಕೆ
ನಿರ್ಮಲಾ ಸೀತಾರಾಮನ್ | PTI
ಹೊಸದಿಲ್ಲಿ: ಶನಿವಾರ ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಯನ್ನು ಶೇ.74ರಿಂದ ಶೇ.100ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಇದು ಜಾಗತಿಕ ವಿಮೆ ದೈತ್ಯರನ್ನು ಆಕರ್ಷಿಸಲಿದೆ ಮತ್ತು ಬಂಡವಾಳ ಒಳಹರಿವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಶೇ.100 ಎಫ್‌ಡಿಐಗೆ ಅವಕಾಶವನ್ನು ಒದಗಿಸುವ ನಿರ್ಧಾರವು 2047ರ ವೇಳೆಗೆ ‘ಎಲ್ಲರಿಗೂ ವಿಮೆ ರಕ್ಷಣೆ’ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಸುಧಾರಣೆಯಾಗಿದೆ. ಈ ಕ್ರಮವು ಸಾಕಷ್ಟು ವಿದೇಶಿ ಹೂಡಿಕೆಗಳನ್ನು ತರುವ,ಸ್ಪರ್ಧೆಯನ್ನು ಮತ್ತು ದೇಶಾದ್ಯಂತ ವಿಮೆ ಸೌಲಭ್ಯದ ಲಭ್ಯತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ವಿದೇಶಿ ಹೂಡಿಕೆಗಳು ಭಾರತೀಯ ವಿಮೆ ಕ್ಷೇತ್ರಕ್ಕೆ ಹೆಚ್ಚು ಅಗತ್ಯವಿರುವ ಬಂಡವಾಳವನ್ನು ಒದಗಿಸುತ್ತವೆ,ವಿಮೆ ಕಂಪನಿಗಳು ಉತ್ತಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಒದಗಿಸುವುದನ್ನು ಸಾಧ್ಯವಾಗಿಸುತ್ತವೆ. ಅಲ್ಲದೆ ಜಾಗತಿಕ ವಿಮೆ ಕಂಪನಿಗಳ ಆಗಮನವು ಅತ್ಯಾಧುನಿಕ ಅಪಾಯ ನಿರ್ವಹಣೆ ಪದ್ಧತಿಗಳು,ಮುಂದುವರಿದ ತಂತ್ರಜ್ಞಾನ ಮತ್ತು ವಿನೂತನ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ.
ರಿನ್ಯೂಬಯ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಚಂದ್ರ ಶೇಖರ ಅವರ ಪ್ರಕಾರ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡುವ ನಿರ್ಧಾರವು ವಿಮೆ ಕ್ಷೇತ್ರದಲ್ಲಿ ಮಾದರಿ ಬದಲಾವಣೆಯನ್ನು ತರಲಿದ್ದು,ಜಾಗತಿಕ ವಿಮೆ ಕಂಪನಿಗಳನ್ನು ಸೆಳೆಯಲಿದೆ.
ವಿದೇಶಿ ವಿಮೆ ಕಂಪನಿಗಳ ಪ್ರವೇಶವು ಆರೋಗ್ಯಕರ ಪೈಪೋಟಿಯನ್ನು ಉತ್ತೇಜಿಸಲಿದ್ದು,ಉತ್ತಮ ಸೇವೆಗಳು,ಹೆಚ್ಚು ಆಯ್ಕೆಗಳು ಮತ್ತು ಬಳಕೆದಾರರಿಗೆ ಸಂಭವನೀಯ ಕಡಿಮೆ ಪ್ರೀಮಿಯಮ್‌ಗಳನ್ನು ಒದಗಿಸಲಿದೆ. ವಿದೇಶಿ ಬಂಡವಾಳದ ಒಳಹರಿವು ವಿಮೆ ಕ್ಷೇತ್ರದಲ್ಲಿ ನೂತನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಅನೇಕ ಜಾಗತಿಕ ವಿಮೆ ಕಂಪನಿಗಳು ಈಗ ಭಾರತಿಯ ಮಾರುಕಟ್ಟೆಯನ್ನು ಪ್ರವೇಶಿಸಬಹುದು, ಇದು ಭಾರತೀಯ ವಿಮೆ ಕಂಪನಿಗಳು ಉತ್ಪನ್ನ ಮತ್ತು ಪ್ರಕ್ರಿಯೆಗಳು,ನವೀನತೆ ಮತ್ತು ಆಧುನಿಕ ತಂತ್ರಜ್ಞಾನಗಳಲ್ಲಿ ಅತ್ಯುತ್ತಮ ಜಾಗತಿಕ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಿದೆ. ಇದು ಅಂತಿಮವಾಗಿ ಗ್ರಾಹಕರು ಅತ್ಯುತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಆಯ್ದುಕೊಳ್ಳಲು ನೆರವಾಗಲಿದೆ ಎಂದು ಶೇಖರ ಹೇಳಿದರು.
ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ನಿರ್ಧಾರವು ಖಂಡಿತವಾಗಿಯೂ ಭಾರೀ ಪರಿಣಾಮವನ್ನು ಬೀರಲಿದೆ. ಅದು ಹೆಚ್ಚಿನ ಪೈಪೋಟಿ,ಹೆಚ್ಚಿನ ನವೀನತೆ,ಆರ್ಥಿಕ ಬೆಳವಣಿಗೆ,ಹೆಚ್ಚಿನ ಲಭ್ಯತೆ ಮತ್ತು ವಿಮೆ ಕಂಪನಿಗಳ ನಡುವೆ ಪಾರದರ್ಶಕತೆಗೆ ಕಾರಣವಾಗುವ ಜೊತೆಗೆ,ಗ್ರಾಹಕರಿಗೆ ಆಯ್ಕೆ ಮತ್ತು ಉತ್ತಮ ಸೇವೆ ಪಡೆದುಕೊಳ್ಳುವ ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸಲಿದೆ ಎಂದು ಇನ್ಶೂರನ್ಸ್ ಬ್ರೋಕರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುಮಿತ್ ಬೊಹ್ರಾ ಹೇಳಿದರು.
ವಿಮೆಯು ಹೆಚ್ಚು ಬಂಡವಾಳವನ್ನು ಬೇಡುವ ಉದ್ಯಮವಾಗಿದೆ ಮತ್ತು ಬಂಡವಾಳ ಲಭ್ಯತೆಯನ್ನು ಹೆಚ್ಚಿಸುವ ಯಾವುದೇ ಕ್ರಮವು ನಿಸ್ಸಂದೇಹವಾಗಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದ ಝುನೊ ಜನರಲ್ ಇನ್ಶೂರನ್ಸ್‌ನ ಎಂಡಿ ಹಾಗೂ ಸಿಇಒ ಶನಾಯ್ ಘೋಷ ಅವರು,ಇದು ಭಾರತೀಯ ಕಾರ್ಯಾಚರಣೆಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಬಯಸುವ ಜಾಗತಿಕ ವಿಮೆ ಕಂಪನಿಗಳನ್ನು ಆಕರ್ಷಿಸಬಹುದು. ಹೆಚ್ಚಿನ ಅಂತರರಾಷ್ಟ್ರೀಯ ಭಾಗವಹಿಸುವಿಕೆಯಿಂದ ಹಲವಾರು ಇತರ ಪ್ರಯೋಜನಗಳು,ವಿಶೇಷವಾಗಿ ಇತ್ತೀಚಿನ ತಂತ್ರಜ್ಞಾನ ಮತ್ತು ಹೊಸ ಉತ್ಪನ್ನಗಳು ಲಭ್ಯವಾಗಲಿವೆ ಎಂದರು.