ಕಾರ್ಮಿಕರನ್ನು ಹೊತ್ತೊಯುತ್ತಿದ್ದ ಬಸ್ ಪಲ್ಟಿ: ಓರ್ವ ಮೃತ್ಯು, 24ಕ್ಕೂ ಅಧಿಕ ಮಂದಿಗೆ ಗಾಯ
Update: 2023-07-22 14:56 IST
ಡೆಹ್ರಾಡೂನ್: ಉತ್ತರಾಖಂಡದ ಉಧಮ್ ಸಿಂಗ್ ನಗರದ ಕಾಶಿಪುರದಲ್ಲಿ 40 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಓರ್ವ ಕಾರ್ಖಾನೆಯ ಕಾರ್ಮಿಕ ಸಾವನ್ನಪ್ಪಿದ್ದು, 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ, ಶನಿವಾರ ಬೆಳಗ್ಗೆ ರಾಮನಗರ ರಸ್ತೆಯಲ್ಲಿ ಬಸ್ ಸ್ಥಳೀಯ ಜವಳಿ ಕಾರ್ಖಾನೆಯ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಾಗ ಅಪಘಾತ ಸಂಭವಿಸಿದೆ.
ಬಸ್ಸು ತಲೆಕೆಳಗಾಗಿದ್ದರಿಂದ ಆ ಪ್ರದೇಶದಲ್ಲಿ ಭಯಭೀತ ವಾತಾವರಣ ಉಂಟಾಯಿತು. ಸ್ಥಳೀಯರು ಬಸ್ಸಿನೊಳಗೆ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕನ ಶವವನ್ನು ಹೊರತೆಗೆದಿದ್ದಾರೆ. ಮೃತರನ್ನು ಸೈನಿಕ ಕಾಲೋನಿಯ ಗೌಶಾಲಾ ಬಡಾವಣೆ ನಿವಾಸಿ ಶಂಕರ್ ಪ್ರಸಾದ್ ಎಂದು ಗುರುತಿಸಲಾಗಿದೆ.