ರಾಜಕೀಯ ಪ್ರೇರಿತ ಇಂಗ್ಲಿಷ್ ವರ್ಣಮಾಲೆ ಕಲಿಸಿದ ಆರೋಪ; ಸಮಾಜವಾದಿ ಪಕ್ಷದ ಮುಖಂಡನ ವಿರುದ್ಧ ಪ್ರಕರಣ ದಾಖಲು
PC: screengrab/x.com/Benarasiyaa
ಲಕ್ನೋ: ಉತ್ತರ ಪ್ರದೇಶದ ಸಹರಣಪುರದಲ್ಲಿ ಪಿಡಿಎ ಪಾಠಶಾಲೆ ವೇಳೆ ರಾಜಕೀಯಪ್ರೇರಿತ ಇಂಗ್ಲಿಷ್ ವರ್ಣಮಾಲೆ ಬೋಧಿಸುತ್ತಿದ್ದ ಆರೋಪದಲ್ಲಿ ಸಮಾಜವಾದಿ ಪಕ್ಷದ ಸ್ಥಳೀಯ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಿಟಿಐ ವರದಿಯ ಪ್ರಕಾರ "ಎ ಫಾರ್ ಅಖಿಲೇಶ್, ಬಿ ಫಾರ್ ಬಾಬಾಸಾಹೇಬ್, ಡಿ ಫಾರ್ ಡಿಂಪಲ್, ಎಂ ಫಾರ್ ಮುಲಾಯಂ ಸಿಂಗ್ ಯಾದವ್" ಹೀಗೆ ಇಂಗ್ಲಿಷ್ ವರ್ಣಮಾಲೆಯನ್ನು ರಾಜಕೀಯಪ್ರೇರಿತವಾಗಿ ಬೋಧಿಸಲಾಗುತ್ತಿದೆ ಎಂಬ ದೂರು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ"
ಕಲ್ಲರಾಪುರ ಗುರ್ಜಾರ್ ನಿವಾಸಿ ಮೈನ್ ಸಿಂಗ್ ಎಂಬುವವರು ಈ ಬಗ್ಗೆ ದೂರು ನೀಡಿದ್ದು, ಎಸ್ಪಿ ನಾಯಕ ಫರ್ಹಾದ್ ಅಲಾಂ ಗಾಡಾ ಪಿಡಿಎ ಪಾಠಶಾಲಾ ಹೆಸರಿನಲ್ಲಿ ಮಕ್ಕಳಿಗೆ ರಾಜಕೀಯಪ್ರೇರಿತ ವರ್ಣಮಾಲೆಯನ್ನು ಕಲಿಸುತ್ತಿದ್ದುದಾಗಿ ದೂರು ನೀಡಲಾಗಿದೆ ಎಂದು ಎಸ್ಪಿ ವ್ಯೋಮ ಬಿಂದಾಲ್ ವಿವರಿಸಿದ್ದಾರೆ.
ರಾಮನಗದಲ್ಲಿರುವ ಗಾಡಾ ನಿವಾಸದಲ್ಲಿ ಚಿತ್ರೀಕರಿಸಿದ್ದು ಎನ್ನಲಾದ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೊದಲ್ಲಿ ಕಂಡುಬರುತ್ತಿರುವ ಮಕ್ಕಳು ಖಾಸಗಿ ಶಾಲೆಯವರಾಗಿದ್ದು, ಶಾಲಾ ಸಮವಸ್ತ್ರದಲ್ಲಿದ್ದಾರೆ. ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.