×
Ad

ದಿಲ್ಲಿ | ಸೌದಿ ಅರೇಬಿಯಾದ ಕೋರಿಕೆ ಮೇರೆಗೆ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯನ್ನು ಬಂಧಿಸಿದ ಸಿಬಿಐ

Update: 2025-08-16 19:27 IST

Photo | NDTV

ಹೊಸದಿಲ್ಲಿ : 1999ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 26 ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಿದ್ದಾರೆ.

ಮುಹಮ್ಮದ್ ದಿಲ್ಶಾದ್ ಬಂಧಿತ ಆರೋಪಿ. ಈತ ಮದೀನಾದಿಂದ ನಕಲಿ ಪಾಸ್ಪೋರ್ಟ್‌ ಮೂಲಕ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. 

ಅಧಿಕಾರಿಗಳ ಪ್ರಕಾರ, ರಿಯಾದ್‌ನಲ್ಲಿ ಹೆವಿ ಮೋಟಾರ್ ಮೆಕ್ಯಾನಿಕ್ ಮತ್ತು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ದಿಲ್ಶಾದ್, 1999ರಲ್ಲಿ ತನ್ನ ಕೆಲಸದ ಸ್ಥಳದಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆ ಬಳಿಕ ನಕಲಿ ಪಾಸ್ ಪೋರ್ಟ್ ಬಳಸಿ ಕೊಲ್ಲಿ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಸೌದಿ ಅರೇಬಿಯಾ 2022ರ ಏಪ್ರಿಲ್‌ನಲ್ಲಿ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ಆರಂಭಿಸಿತ್ತು.

ಉತ್ತರ ಪ್ರದೇಶ ಮೂಲದವನಾದ ಈತನ ಬಂಧನಕ್ಕೆ ಸೌದಿ ಅರೇಬಿಯಾ ಸಿಬಿಐ ಅಧಿಕಾರಿಗಳ ನೆರವು ಕೋರಿತ್ತು. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ದಿಲ್ಶಾದ್ ಪತ್ತೆಗೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಆದರೆ ಇದು ಆರೋಪಿಯ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.

ತನಿಖೆಯ ಸಮಯದಲ್ಲಿ ದಿಲ್ಶಾದ್ ತನ್ನ ಗುರುತನ್ನು ಮರೆಮಾಡಿ ಕತಾರ್, ಕುವೈತ್ ಮತ್ತು ಸೌದಿ ಅರೇಬಿಯಾಕ್ಕೆ ಪ್ರಯಾಣಿಸುತ್ತಿರುವುದು ತಿಳಿದು ಬಂದಿದೆ. ಆತನ ಪಾಸ್‌ಪೋರ್ಟ್‌ ಸಂಖ್ಯೆ ಆಧರಿಸಿ ಮತ್ತೊಂದು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಅದರಂತೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News