×
Ad

ಭಾರತದ ವಿರುದ್ಧ ಚೀನಾದ ಎಐ ಚಾಲಿತ ಸುಳ್ಳು ಮಾಹಿತಿ ಪ್ರಚಾರ: ಅಮೆರಿಕಾ ವರದಿ

ಆಪರೇಷನ್ ಸಿಂಧೂರ್ ನಂತರ ರಾಫೆಲ್ ಗುರಿಯಾಗಿಸಿ ಅಭಿಯಾನ

Update: 2025-11-19 21:23 IST

Photo : PTI

ವಾಷಿಂಗ್ಟನ್, ನ.19: ಆಪರೇಷನ್ ಸಿಂಧೂರ್ ಬಳಿಕ ಎಐ(ಕೃತಕ ಬುದ್ಧಿಮತ್ತೆ) ರಚಿತ ಚಿತ್ರಗಳು ಮತ್ತು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಿಕೊಂಡು ಜಾಗತಿಕ ರಕ್ಷಣಾ ಗ್ರಹಿಕೆಗಳ ಮೇಲೆ ಪ್ರಭಾವ ಬೀರಲು ಚೀನಾವು ತಪ್ಪು ಮಾಹಿತಿ ಅಭಿಯಾನವನ್ನು ಆಯೋಜಿಸಿದೆ ಎಂದು ಅಮೆರಿಕಾ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗ ಆರೋಪಿಸಿದೆ.

ಚೀನಾವು ವಿಮಾನಗಳ ಅವಶೇಷಗಳೆಂದು ಬಿಂಬಿಸಲಾದ ಎಐ ಚಿತ್ರಗಳನ್ನು ಪ್ರಚಾರ ಮಾಡಲು, ಭಾರತೀಯ ಮತ್ತು ಫ್ರೆಂಚ್ ವಿಮಾನಗಳನ್ನು ಚೀನಾದ ವ್ಯವಸ್ಥೆಗಳಿಂದ ಹೊಡೆದುರುಳಿಸಲಾಗಿದೆ ಎಂದು ತೋರಿಸಲು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿಯೋಜಿಸಿದೆ ಎಂದು ಸಂಸತ್ತಿಗೆ ಸಲ್ಲಿಸಲಾದ ವರದಿ ತಿಳಿಸಿದೆ.

ಭಾರತೀಯ ವಾಯುಪಡೆ ನಿರ್ವಹಿಸುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧವಿಮಾನದ ಜಾಗತಿಕ ಮಾರುಕಟ್ಟೆ ಬೇಡಿಕೆಯನ್ನು ದುರ್ಬಲಗೊಳಿಸಿ, ತಾನು ನಿರ್ಮಿಸಿರುವ ಅತ್ಯಾಧುನಿಕ ಜೆ-35 ಯುದ್ಧ ವಿಮಾನಗಳಿಗೆ ಪ್ರಚಾರ ನೀಡುವುದು ಚೀನಾದ ಉದ್ದೇಶವಾಗಿದೆ. ಇದು ನೇರ ಮಿಲಿಟರಿ ಮುಖಾಮುಖಿಯಿಲ್ಲದೆ ಭೌಗೋಳಿಕ ರಾಜಕೀಯ ವಿದ್ಯಮಾನಗಳ ಮೇಲೆ ಪ್ರಭಾವ ಬೀರಲು ಚೀನಾ ರೂಪಿಸಿದ `ಬೂದು ವಲಯ ಕಾರ್ಯತಂತ್ರದ' ಭಾಗವಾಗಿದೆ. ಚೀನಾವು ಮೇ ತಿಂಗಳಿನಲ್ಲಿ ಭಾರತ-ಪಾಕಿಸ್ತಾನ ಸಂಘರ್ಷವನ್ನು `ಅವಕಾಶವಾದಿಯಾಗಿ' ಬಳಸಿಕೊಂಡಿತು. ಉದ್ವಿಗ್ನತೆ ತೀವ್ರಗೊಂಡಾಗ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಂಡಿತು ಎಂದು ವರದಿ ಹೇಳಿದೆ.

ಭಾರತ-ಚೀನಾ ಗಡಿವಿವಾದಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವಿನ ಮೂಲಭೂತ `ಅಸಮತೆ'ಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದು ಗಡಿ ವಿವಾದವನ್ನು ವರ್ಗೀಕರಿಸಲು ಪ್ರಯತ್ನಿಸುತ್ತಿರುವ ಚೀನಾವು ಭಾಗಶಃ ನಿರ್ಣಯಗಳನ್ನು ಪಡೆಯಲು ಉನ್ನತ ಮಟ್ಟದ ರಾಜತಾಂತ್ರಿಕ ಪ್ರಕ್ರಿಯೆಗಳನ್ನು ಬಳಸಿಕೊಂಡಿದೆ. ತನ್ನ ಪ್ರಾದೇಶಿಕ ಹಕ್ಕುಗಳನ್ನು ರಾಜಿ ಮಾಡಿಕೊಳ್ಳದೆ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಹಕಾರಕ್ಕಾಗಿ ಕಾರ್ಯತಂತ್ರದ ಅವಕಾಶವನ್ನು ಉಳಿಸಿಕೊಳ್ಳಲು ಈ ವಿಧಾನವನ್ನು ಚೀನಾ ಬಳಸಿಕೊಳ್ಳುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಗಡಿ ಪ್ರಶ್ನೆಯ ಸುಸ್ಥಿರ ಮತ್ತು ಸಮಗ್ರ ಇತ್ಯರ್ಥವಿಲ್ಲದೆ ದ್ವಿಪಕ್ಷೀಯ ಸಂಬಂಧಗಳ ನಿಜವಾದ ಸಾಮಾನ್ಯೀಕರಣ ಸಾಧ್ಯವಿಲ್ಲ ಎಂದು ಒತ್ತಾಯಿಸುತ್ತಿದೆ. ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಚೀನಾದ ನಿಲುವಿನ ಗಂಭೀರತೆಯನ್ನು ಭಾರತ ಸ್ಪಷ್ಟವಾಗಿ ಗುರುತಿಸಿದೆ. ಎರಡು ದೇಶಗಳ ನಡುವಿನ ಇತ್ತೀಚಿನ ಒಪ್ಪಂದಗಳು `ಹೆಚ್ಚಾಗಿ ಪರಿಕಲ್ಪನಾತ್ಮಕವಾಗಿ' ಉಳಿದಿದ್ದು ವಿವರವಾದ ಕಾರ್ಯವಿಧಾನ ಅಥವಾ ಅರ್ಥಪೂರ್ಣ ಅನುಸರಣೆಯ ಕೊರತೆಯಿದೆ ಎಂದು ವರದಿ ಹೇಳಿದೆ.

ಭಾರತ-ಚೀನಾ ಸಂಬಂಧ ಉಭಯ ದೇಶಗಳ ನಡುವಿನ ಪ್ರಸ್ತುತ ರಾಜತಾಂತ್ರಿಕ ಪ್ರಕ್ರಿಯೆಗಳು ನಿಜವಾದ ಸ್ಥಿರೀಕರಣದ ಕಡೆಗೆ ದೀರ್ಘಾವಧಿಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತವೆಯೇ ಅಥವಾ ಅಮೆರಿಕಾದೊಂದಿಗಿನ ಅಸ್ಥಿರ ಮಾತುಕತೆಗಳ ನಡುವೆ ಭಾರತದ ರಕ್ಷಣಾತ್ಮಕ ಕಾರ್ಯತಂತ್ರವಾಗಿದೆಯೇ ಎಂಬುದು ಅನಿಶ್ಚಿತವಾಗಿ ಉಳಿದಿದೆ.

ಎಸ್ಸಿಒ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಭೇಟಿ ನೀಡಿ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ಭೇಟಿಯಾಗಿರುವುದು ಈ ಕಾರ್ಯತಂತ್ರದ ಭಾಗವಾಗಿರಬಹುದು ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News