370ನೇ ವಿಧಿಯು ಅಂಬೇಡ್ಕರ್ ರ ಒಂದೇ ಸಂವಿಧಾನ ಸಿದ್ಧಾಂತಕ್ಕೆ ವಿರುದ್ಧವಾಗಿತ್ತು: CJI ಗವಾಯಿ
CJI ಗವಾಯಿ | PC : PTI
ನಾಗಪುರ: “ಡಾ. ಬಿ.ಆರ್. ಅಂಬೇಡ್ಕರ್ ಅವರ ಕಲ್ಪನೆಯಲ್ಲಿದ್ದುದು ದೇಶಕ್ಕೆ ಒಂದೇ ಸಂವಿಧಾನ. ಅವರು ಎಂದಿಗೂ ಯಾವುದೇ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನದ ಕಲ್ಪನೆಯನ್ನು ಬೆಂಬಲಿಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ”, ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ಸಂವಿಧಾನದ ಪೀಠಿಕೆ ಉದ್ಯಾನವನದ ಉದ್ಘಾಟನೆ ಮತ್ತು ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು. “ಅಂಬೇಡ್ಕರ್ ಅವರ ಒಂದೇ ಸಂವಿಧಾನದ ಕಲ್ಪನೆಯಿಂದ ಸುಪ್ರೀಂ ಕೋರ್ಟ್ ಸ್ಫೂರ್ತಿ ಪಡೆದಿದೆ. ಸಂವಿಧಾನವು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ ದೇಶವನ್ನು ಒಗ್ಗಟ್ಟಿನಲ್ಲಿಡುತ್ತದೆ. ಒಂದು ದೇಶಕ್ಕೆ ಒಂದೇ ಸಂವಿಧಾನ ಇರುವುದು ಸೂಕ್ತ. ನಾವು ದೇಶವನ್ನು ಒಗ್ಗಟ್ಟಿನಿಂದ ಇರಿಸಲು ಬಯಸಿದರೆ, ನಮಗೆ ಒಂದೇ ಸಂವಿಧಾನ ಸಾಕು”, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಶ್ರೀಲಂಕಾದ ಪರಿಸ್ಥಿತಿಯನ್ನು ನೋಡಿ. ನಮ್ಮ ದೇಶವು ಯುದ್ಧದಂತಹ ಸವಾಲುಗಳನ್ನು ಎದುರಿಸಿದಾಗಲೆಲ್ಲಾ ಒಗ್ಗಟ್ಟನ್ನು ಪ್ರದರ್ಶಿಸಿದೆ”, ಎಂದು ಗವಾಯಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸರ್ವಾನುಮತದಿಂದ ಎತ್ತಿಹಿಡಿದ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠದಲ್ಲಿ ಬಿ.ಆರ್.ಗವಾಯಿ ಅವರು ಒಬ್ಬರಾಗಿದ್ದರು.