ಜಿರಳೆ ಸಾಯುವವರೆಗೂ ನೇಣು ಹಾಕಲಾಗಿದೆ!: ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯ ಲಾಗ್ ಬುಕ್ ವೈರಲ್
Credit: X/@jagritichandra
ಹೊಸದಿಲ್ಲಿ: ಅಡುಗೆ ಕೋಣೆಯಲ್ಲಿ ಗೃಹಿಣಿಯರ ಕಣ್ಣಿಗೆ ಜಿರಳೆ ಬಿದ್ದರೆ, ಕೆಲವರು ಹೌಹಾರಿ ಹಿಂದೆ ಸರಿಯುತ್ತಾರೆ. ಮತ್ತೆ ಕೆಲವರು ತಮಗೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅದನ್ನು ಬಡಿದು ಕೊಲ್ಲುತ್ತಾರೆ. ಇನ್ನು ತಿನ್ನುವ ಆಹಾರದಲ್ಲೇ ಜಿರಳೆ ಕಂಡು ಬಂದರೆ, ಮುಖ ಕಿವಿಚಿಕೊಂಡು ಅದನ್ನು ಬಿಸಾಡುತ್ತಾರೆ. ಆದರೆ, ಇಲ್ಲೊಂದು ಕುತೂಹಲಕಾರಿ ಘಟನೆ ವರದಿಯಾಗಿದೆ. ಏರ್ ಇಂಡಿಯಾ ವಿಮಾನದಲ್ಲಿ ತೆರಳುತ್ತಿದ್ದ ಪ್ರಯಾಣಿಕರೊಬ್ಬರಿಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಗಳು ಪೂರೈಸಿದ ಆಹಾರದಲ್ಲಿ ಜಿರಳೆ ಕಂಡು ಬಂದಿದ್ದು, ಈ ಕುರಿತು ಅವರು ವಿಮಾನ ಪರಿಚಾರಕ ಸಿಬ್ಬಂದಿಗಳಿಗೆ ದೂರು ನೀಡಿದ್ದಾರೆ.
ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ನಿಯಮದಂತೆ ವಿಮಾನ ಕ್ಯಾಬಿನ್ ಸಿಬ್ಬಂದಿಗಳು ಆ ದೂರನ್ನು ತಮ್ಮ ಲಾಗ್ ಬುಕ್ ನಲ್ಲಿ ನಮೂದಿಸಿಕೊಂಡಿದ್ದಾರೆ. ಆದರೆ, ಅದು ಇಷ್ಟಕ್ಕೇ ಅಂತ್ಯಗೊಂಡಿಲ್ಲ. ಅದಕ್ಕೆ ಪರ್ಯಾಯವಾಗಿ ನೀಡಿದ ಪರಿಹಾರವನ್ನೂ ಅವರು ನಮೂದಿಸಿದ್ದಾರೆ. ಆ ಪರಿಹಾರವೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಯ ದೋಷಪೂರಿತ ಲಾಗ್ ಬುಕ್ ಕುರಿತು ತಮಾಷೆ ಮಾಡತೊಡಗಿದ್ದಾರೆ.
“ಜಿರಳೆಯನ್ನು ಸಾಯುವವರೆಗೂ ನೇಣು ಹಾಕಲಾಗಿದೆ!” ಎಂದು ಲಾಗ್ ಬುಕ್ ನಲ್ಲಿ ಬರೆಯಲಾಗಿದೆ.
ಅಕ್ಟೋಬರ್ 24ರಂದು ನಡೆದಿರುವ ಈ ಘಟನೆಯನ್ನು ವೈಮಾನಿಕ ವಲಯದ ಪತ್ರಕರ್ತೆ ಜಾಗೃತಿ ಚಂದ್ರ ಹಂಚಿಕೊಂಡಿದ್ದು, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯ ಕ್ಯಾಬಿನ್ ಸಿಬ್ಬಂದಿಗಳ ದೋಷಪೂರಿತ ಲಾಗ್ ಬುಕ್ ಪ್ರತಿಯನ್ನೂ ತಮ್ಮ ಪೋಸ್ಟ್ ನಲ್ಲಿ ಲಗತ್ತಿಸಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯಭರಿತ ವಿಡಂಬನೆ, ಚರ್ಚೆಗಳಿಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, “ಆ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತೊ ಇಲ್ಲವೊ ಎಂದು ನಾನು ತಿಳಿಯಲು ಬಯಸುತ್ತೇನೆ” ಎಂದು ತಮಾಷೆ ಮಾಡಿದ್ದಾರೆ. ಮತ್ತೊಂದು ಹಾಸ್ಯಭರಿತ ಪ್ರತಿಕ್ರಿಯೆಯಲ್ಲಿ, “ಮೃತ ಜಿರಳೆಯ ಕುಟುಂಬದ ಸದಸ್ಯರನ್ನು ಪತ್ತೆ ಹಚ್ಚಲು ಸಾಧ್ಯವಾಗದೆ ಇದ್ದುದರಿಂದ, ಅದನ್ನು ಆಹಾರ ತಯಾರಕರಿಗೆ ಹಸ್ತಾಂತರಿಸಲಾಗಿದೆ” ಎಂದು ಮತ್ತೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಕುಹಕವಾಡಿದ್ದಾರೆ.
ಇನ್ನೂ ಕೆಲವು ತಮಾಷೆ ಹಾಗೂ ಕುತೂಹಲಕಾರಿ ಪ್ರತಿಕ್ರಿಯೆಗಳೂ ಈ ಪೋಸ್ಟ್ ಗೆ ಬಂದಿದ್ದು, “ಕೇವಲ ನೇಣು ಹಾಕಿದ್ದೇಕೆ? ಅದನ್ನು ಸಾಯುವವರೆಗೂ ಕಲ್ಲಿನಲ್ಲಿ ಜಜ್ಜಿ ಹಾಕಬೇಕಿತ್ತು” ಎಂದು ಓರ್ವ ಬಳಕೆದಾರರು ಹಾಸ್ಯ ಮಾಡಿದ್ದರೆ, ಮತ್ತೊಬ್ಬ ಬಳಕೆದಾರರು, “ಅದನ್ನು ನೇತು ಹಾಕಲು ಅವರು ಟೀ ಬ್ಯಾಗ್ ಅನ್ನು ಬಳಸಿದರೆ?” ಎಂದು ಛೇಡಿಸಿದ್ದಾರೆ.
ಆದರೆ, ಓರ್ವ ಬಳಕೆದಾರರು ಮಾತ್ರ ಆ ದೋಷಪೂರಿತ ಲಾಗ್ ಬುಕ್ ನಲ್ಲಿ ತಾನು ಕೈಗೊಂಡ ಕ್ರಮವನ್ನು ಉಲ್ಲೇಖಿಸಿರುವ ವಿಮಾನ ಪರಿಚಾರಕಿಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. “ನೀವು ಈ ಏರ್ ಇಂಡಿಯಾ ಕ್ಯಾಬಿನ್ ಫ್ಲೈಟ್ ಲಾಗ್ ಬುಕ್ ಅನ್ನು ಎಲ್ಲಿಂದ ಪಡೆದಿರಿ? ಏರ್ ಇಂಡಿಯಾದಲ್ಲಿನ ಉದ್ಯೋಗಿಗಳು ವಿಮಾನ ಕ್ಯಾಬಿನ್ ಸಿಬ್ಬಂದಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬ ಸಂಗತಿ ನಿಮಗೆ ತಿಳಿದಿದ್ದರೆ, ನೀವು ಉದ್ಯೋಗ ಕಳೆದುಕೊಳ್ಳುವಂತಹ ಅಪಾಯವನ್ನು ಅವರಿಗೆ ನಿರ್ಮಾಣ ಮಾಡುತ್ತಿರಲಿಲ್ಲ. ಆ ವಲಯದಲ್ಲಿ ಹಾರಾಟ ನಡೆಸುವ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿಗಳ ಒಳಿತಿಗಾಗಿ ನೀವು ಈ ಪೋಸ್ಟ್ ಅನ್ನು ತಕ್ಷಣವೇ ಅಳಿಸಿ ಹಾಕಿ ಎಂದು ನಾನು ಸಲಹೆ ನೀಡುತ್ತೇನೆ” ಎಂದು ಮನವಿ ಮಾಡಿದ್ದಾರೆ.
ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೂ, ಏರ್ ಇಂಡಿಯಾ ಮಾತ್ರ ಇದುವರೆಗೆ ಈ ವೈರಲ್ ಪೋಸ್ಟ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೌಜನ್ಯ: deccanherald.com