×
Ad

ಲೋಕಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಕಾಂಗ್ರೆಸ್

Update: 2023-07-26 10:53 IST

ಹೊಸದಿಲ್ಲಿ: ಮಣಿಪುರ ವಿಚಾರಕ್ಕೆ ಸಂಬಂಧಿಸಿ ಸಂಸತ್ತಿನ ಕಲಾಪ ಅಸ್ತವ್ಯಸ್ತ ವಾಗಿರುವ ನಡುವೆಯೇ ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಕಾಂಗ್ರೆಸ್ ಇಂದು ಅವಿಶ್ವಾಸ ನಿರ್ಣಯ ಮಂಡಿಸಿದೆ ಎಂದು NDTV ವರದಿ ಮಾಡಿದೆ.

ಲೋಕಸಭೆಯ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ಅವರು ಮಣಿಪುರ ವಿಷಯದ ಕುರಿತು ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ಸಲ್ಲಿಸಿದರು.

ಅವಿಶ್ವಾಸ ನಿರ್ಣಯವು ಸರಕಾರದ ಬಹುಮತಕ್ಕೆ ಸವಾಲು ಹಾಕಲು ಪ್ರತಿಪಕ್ಷಗಳಿಗೆ ಅವಕಾಶ ನೀಡುತ್ತದೆ. 

ಏತನ್ಮಧ್ಯೆ, ಮಣಿಪುರ ವಿಷಯದ ಬಗ್ಗೆ ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷದ ನಾಯಕ ನಾಗೇಶ್ವರ ರಾವ್ ಅವರು ಪ್ರತ್ಯೇಕ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಗೆ ಮಂಡಿಸಿದರು.

ಸದನದಲ್ಲಿ 50 ಸದಸ್ಯರು ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡನೆ ನಡೆಯಲಿದೆ. ಕಾಂಗ್ರೆಸ್ ನಿರ್ಣಯವು ಅಗತ್ಯ ಬೆಂಬಲವನ್ನು ಕಂಡುಕೊಳ್ಳುವ ನಿರೀಕ್ಷೆಯಿದ್ದರೂ, BRS ಲೋಕಸಭೆಯಲ್ಲಿ ಕೇವಲ 9 ಸ್ಥಾನಗಳನ್ನು ಹೊಂದಿದೆ.

543 ಸದಸ್ಯರ ಲೋಕಸಭೆಯಲ್ಲಿ, ಆಡಳಿತಾರೂಢ ಎನ್ ಡಿಎ ಪ್ರಸ್ತುತ 331 ಸದಸ್ಯರ ಬಲವನ್ನು ಹೊಂದಿದೆ. ಪ್ರತಿಪಕ್ಷ I.N.D.I.A ಮೈತ್ರಿಕೂಟವು ಸದನದಲ್ಲಿ 144 ಸದಸ್ಯರನ್ನು ಹೊಂದಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನದಿಂದಲೂ ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಸದನದಲ್ಲಿ ಪ್ರಧಾನಿ ಮೋದಿ ಮಾತನಾಡಬೇಕೆಂದು ಒತ್ತಾಯಿಸುತ್ತಿರುವ ಪ್ರತಿಪಕ್ಷ ನಾಯಕರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಜುಲೈ 20 ರಂದು ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ವಿಚಾರದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ನಿರಂತರ ಗದ್ದಲವಾಗುತ್ತಿದೆ.

ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯವು ಅಂಕಿಅಂಶ ಪರೀಕ್ಷೆಯಲ್ಲಿ ವಿಫಲವಾಗುವುದಾದರೂ, ಚರ್ಚೆಯ ಸಮಯದಲ್ಲಿ ಮಣಿಪುರ ವಿಷಯದ ಬಗ್ಗೆ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬಹುದು

ಮಣಿಪುರದ ಪರಿಸ್ಥಿತಿಯ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುತ್ತಾರೆಂದು ಸರಕಾರ ಹೇಳುತ್ತಿದ್ದರೂ ಸಹ, ನಿರ್ಣಾಯಕ ವಿಷಯದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಮಾತನಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ

ಜುಲೈ 20 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ಉಭಯ ಸದನಗಳನ್ನು ಪದೇ ಪದೇ ಮುಂದೂಡುವಂತೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುತ್ತಾ ಬಂದಿವೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News