ಗೋವಿಗೆ ‘ರಾಷ್ಟ್ರಮಾತೆ’ ಸ್ಥಾನಮಾನ, ಸಂಪೂರ್ಣ ಗೋಹತ್ಯೆ ನಿಷೇಧಕ್ಕೆ ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ ಆಗ್ರಹ
ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ : Photo Credit : PTI
ಹೊಸದಿಲ್ಲಿ: ಗೋವಿಗೆ ‘ರಾಷ್ಟ್ರಮಾತೆ’ ಅಥವಾ ‘ರಾಜಮಾತೆ’ ಸ್ಥಾನಮಾನ ನೀಡಬೇಕು ಹಾಗೂ ದೇಶಾದ್ಯಂತ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಸಂಸದ ಉಜ್ವಲ್ ರಮಣ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗುರುವಾರ ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಭಾರತದ ಸ್ಥಳೀಯ ದೇಸೀಯ ಗೋ ತಳಿಗಳ ಸಂಖ್ಯೆಯು ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿರುವುದರತ್ತ ಸದನದ ಗಮನ ಸೆಳೆದರು. “ಗೋವು ನಮ್ಮ ರಾಷ್ಟ್ರೀಯ ಗುರುತು ಮತ್ತು ಹೆಮ್ಮೆಯ ಸಂಕೇತ. ದೇಶೀಯ ಗೋ ತಳಿಗಳ ಅಸ್ತಿತ್ವ, ಗುರುತು ಮತ್ತು ಘನತೆಯನ್ನು ಕಾಪಾಡುವುದು ತುರ್ತು ಅಗತ್ಯವಾಗಿದೆ,” ಎಂದು ಸಿಂಗ್ ಹೇಳಿದರು.
ಎಲ್ಲಾ ಜಾನುವಾರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಕೂಡ ಅವರು ಮುಂದಿಟ್ಟರು. ಹಸುವಿಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡುವಂತೆ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದರು ನಿರಂತರವಾಗಿ ಆಗ್ರಹಿಸುತ್ತಿದ್ದು, ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಹೇಳಿದರು.