×
Ad

ಕಾರ್ಮಿಕರ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ ನಾಲ್ಕೈದು ದಿನಗಳ ಬೇಕಾಗಬಹುದು: ಅಧಿಕಾರಿಗಳು

Update: 2023-11-19 23:17 IST

Photo: twitter.com/htTweets

ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಿರ್ಮಾಣ ಹಂತದ ಸುರಂಗ ಕುಸಿದು ಅವಶೇಷಗಳ ಅಡಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ರವಿವಾರ ಕೂಡ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕಾರ್ಮಿಕರು ಕಳೆದ 170 ಗಂಟೆಗಳಿಂದ ಸುರಂಗದ ಒಳಗೆ ಸಿಲುಕಿರುವುದರಿಂದ ಅವರ ಆರೋಗ್ಯದ ಕುರಿತು ಆತಂಕ ವ್ಯಕ್ತವಾಗಿದೆ.

ಕುಸಿದ ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರು ಇರುವ ಸ್ಥಳವನ್ನು ತಲುಪಲು ಮೇಲಿನಿಂದ ಲಂಬ ರಂಧ್ರ ಕೊರೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಅತ್ಯಧಿಕ ಕಾರ್ಯಕ್ಷಮತೆಯ ಕೊರೆಯುವ ಯಂತ್ರ ಮಧ್ಯಪ್ರದೇಶದ ಇಂದೋರ್ನಿಂದ ಇಲ್ಲಿಗೆ ತಲುಪಿದ ಬಳಿಕ ಶನಿವಾರ ಸಂಜೆ ಲಂಬ ರಂಧ್ರ ಕೊರೆಯಲು ಸಿದ್ಧತೆ ಆರಂಭವಾಗಿದೆ.

ಸ್ಥಳದಲ್ಲಿರುವ ಪ್ರಧಾನಿ ಮಂತ್ರಿ ಕಚೇರಿ (ಪಿಎಂಒ)ಯ ಅಧಿಕಾರಿಗಳು ಹಾಗೂ ತಜ್ಞರ ತಂಡ ಕಾರ್ಮಿಕರನ್ನು ರಕ್ಷಿಸಲು ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ‘‘ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಆದಷ್ಟು ಬೇಗ ತಲುಪಲು ಕೇವಲ ಒಂದೇ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಬದಲು, ಏಕ ಕಾಲದಲ್ಲಿ ಐದು ಯೋಜನೆಗಳಲ್ಲಿ ಕಾರ್ಯನಿರ್ವಹಿಸಬೇಕೆಂಬ ಒಮ್ಮತದ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆ’’ ಎಂದು ಪ್ರಧಾನ ಮಂತ್ರಿ ಅವರ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ತಿಳಿಸಿದ್ದಾರೆ.

ಹಲವು ಸಂಸ್ಥೆಗಳ ಸಂಘಟಿತ ಪ್ರಯತ್ನದಿಂದ ಕಾರ್ಮಿಕರನ್ನು ನಾಲ್ಕೈದು ದಿನಗಳಲ್ಲಿ ರಕ್ಷಿಸುವ ಸಾಧ್ಯತೆ ಇದೆ. ಆದರೆ, ದೇವರು ದಯೆ ತೋರಿದರೆ, ಅವರನ್ನು ಅದಕ್ಕಿಂತ ಮೊದಲೇ ರಕ್ಷಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರವಿವಾರ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಹಾಗೂ ರಕ್ಷಣೆ, ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದಾರೆ. ‘‘ನಾವು ಎಲ್ಲಾ ರೀತಿಯಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ. ಇಲ್ಲಿ ಎಲ್ಲಾ ರೀತಿಯ ತಜ್ಞರ ತಂಡ ಕಾರ್ಯ ನಿರ್ವಹಿಸುತ್ತಿದೆ’’ ಧಾಮಿ ತಿಳಿಸಿದ್ದಾರೆ.

ಕೊರೆಯುವ ಯಂತ್ರದಲ್ಲಿ ಇದ್ದಕ್ಕಿದ್ದಂತೆ ಬಿರುಕು ಬಿಡುವ ಸದ್ದನ್ನು ಅಧಿಕಾರಿಗಳು ಕೇಳಿದ ಬಳಿಕ ಶುಕ್ರವಾರ ಸಂಜೆ ಕೊರೆಯುವುದನ್ನು ನಿಲ್ಲಿಸಲಾಗಿತ್ತು.

ಕಾರ್ಮಿಕರ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ ನಾಲ್ಕೈದು ದಿನಗಳ ಬೇಕಾಗಬಹುದು: ಅಧಿಕಾರಿಗಳು



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News