“ದ್ವೇಷದ ಸಂಸ್ಕೃತಿ”; ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯಲು ಸಹಪಾಠಿಗಳಿಗೆ ಹೇಳಿದ ಶಿಕ್ಷಕಿಯ ವಿರುದ್ಧ ವ್ಯಾಪಕ ಆಕ್ರೋಶ
ಹೊಸದಿಲ್ಲಿ: ಉತ್ತರ ಪ್ರದೇಶದ ಮುಝಫ್ಫರಪುರ್ ಜಿಲ್ಲೆಯ ಖುಬಪುರ್ ಗ್ರಾಮದ ನೇಹಾ ಪಬ್ಲಿಕ್ ಸ್ಕೂಲಿನಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ತಮ್ಮ ಮುಸ್ಲಿಂ ಸಹಪಾಠಿಗೆ ಹೊಡೆಯುವಂತೆ ಹೇಳುತ್ತಿರುವ ವೀಡಿಯೋ ವ್ಯಾಪಕ ಆಕ್ರೋಶ ಮೂಡಿಸಿದೆ. ವಿಪಕ್ಷಗಳು ಹಾಗೂ ಇತರ ಸಂಘ ಸಂಸ್ಥೆಗಳು ಇದನ್ನು “ದ್ವೇಷದ ಸಂಸ್ಕೃತಿ” ಎಂದು ಬಣ್ಣಿಸಿವೆ.
ವೈರಲ್ ಆಗಿರುವ ವೀಡಿಯೋದಲ್ಲಿ ತರಗತಿಯಲ್ಲಿ ನಿಂತಿರುವ ಮುಸ್ಲಿಂ ವಿದ್ಯಾರ್ಥಿಗೆ ಇನ್ನೊಬ್ಬ ಹೊಡೆಯುತ್ತಿರುವುದು ಹಾಗೂ ಆಗ ಶಿಕ್ಷಕಿ ಇತರ ವಿದ್ಯಾರ್ಥಿಗಳಿಗೂ ತಮ್ಮ ಆಸನಗಳಿಂದ ಎದ್ದು ಆತನಿಗೆ ಜೋರಾಗಿ ಹೊಡೆಯುವಂತೆ ಹೇಳುತ್ತಿರುವುದು ಕೇಳಿಸುತ್ತದೆ.
“ನಾನು ಘೋಷಿಸಿದ್ದೇನೆ- ಈ ಎಲ್ಲಾ ಮುಸ್ಲಿಂ ಮಕ್ಕಳು, ಯಾರ ಪ್ರದೇಶಕ್ಕಾದರೂ ಹೋಗುತ್ತಾರೆ,” ಎಂದು ಆಕೆ ಒಬ್ಬ ವ್ಯಕ್ತಿಗೆ ಹೇಳುವುದು ಹಾಗೂ ಆತ ಅದಕ್ಕೆ ಒಪ್ಪುವುದು ಕೂಡ ಕೇಳಿಸುತ್ತದೆ.
ನಂತರ ಆಕೆ ಮುಸ್ಲಿಂ ಹುಡುಗನನ್ನು ಥಳಿಸಲು ಇನ್ನೊಬ್ಬ ಹುಡುಗನಿಗೆ ಹೇಳುತ್ತಾರೆ- “ಅವನ ಸೊಂಟಕ್ಕೆ ಹೊಡಿ… ಅವನ ಮುಖ ಕೆಂಪಾಗುತ್ತಿದೆ, ಎಲ್ಲರೂ ಅವನ ಸೊಂಟಕ್ಕೆ ಹೊಡೆಯಿರಿ,” ಎಂದು ಆಕೆ ಹೇಳುತ್ತಾರೆ.
ದೌರ್ಜನ್ಯಕ್ಕೊಳಗಾದ ಬಾಲಕ ಎಲ್‌ಕೆಜಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕೃಷಿಕರಾಗಿದ್ದು ಶಿಕ್ಷಕಿಯನ್ನು ತೃಪ್ತಾ ತ್ಯಾಗಿ ಎಂದು ಗುರುತಿಸಿದ್ದಾರೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, “ಮುಖ್ಯಮಂತ್ರಿ ಆದಿತ್ಯನಾಥ್ ಈ ಘಟನೆ ಬಗ್ಗೆ ಮಾತನಾಡುವರೇ ಅಥವಾ ಅದನ್ನು ಸಾರ್ವಜನಿಕವಾಗಿ ಪ್ರಧಾನಿ ಮೋದಿ ಖಂಡಿಸುವರೇ? ಶಿಕ್ಷಕಿಗೆ ಶಿಕ್ಷೆಯಾಗುವುದೇ ಅಥವಾ ದ್ವೇಷದ ಸಂಸ್ಕೃತಿಯನ್ನು ರಾರಾಜಿಸಲು ಅನುಮತಿಸಲಾಗುವುದೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ ಬಿಜೆಪಿ ಹರಡಿರುವ ಸೀಮೆಎಣ್ಣೆಯ ಪರಿಣಾಮ ಇದು ಎಂದು ಹೇಳಿದ್ದಾರೆ. “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷಬೀಜವನ್ನು ಬಿತ್ತಲಾಗುತ್ತಿದೆ. ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯನ್ನಾಗಿಸಲಾಗಿದೆ. ಇದಕ್ಕಿಂತ ಕೆಟ್ಟದ್ದನ್ನು ದೇಶಕ್ಕೆ ಯಾವುದೇ ಶಿಕ್ಷಕ ಮಾಡಲಾರ,” ಎಂದಿದ್ದಾರೆ.
ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಕೂಡ ಘಟನೆಯನ್ನು ಖಂಡಿಸಿದೆ
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಪ್ರತಿಕ್ರಿಯಿಸಿ, “ನ್ಯಾಯಾಲಯದ ಮೊರೆ ಹೋಗಲು ತಮ್ಮಿಂದ ಅಸಾಧ್ಯ, ದೂರು ದಾಖಲಿಸುವುದಿಲ್ಲ ಎಂದು ಮಗುವಿನ ತಂದೆ ಹೇಳಿದ್ದಾರೆ. ಆದರೆ ಘಟನೆಯನ್ನು ಪರಿಗಣಿಸಿ ಎಫ್‌ಐಆರ್ ದಾಖಲಿಸಬೇಕು,” ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಉವೈಸಿ ಈ ಘಟನೆಯು ಮೋದಿ ಸರ್ಕಾರದ ಕಳೆದ ಒಂಬತ್ತು ವರ್ಷದ ಆಡಳಿತದ ಫಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಹಾಗೂ ಕಾನೂನು ಕ್ರಮಕೈಗೊಳ್ಳಲಿದೆ ಎಂದು ಆಯೋಗದ ಅಧ್ಯಕ್ಷೆ ಪ್ರಿಯಾಂಕ್ ಕನೂಂಗು ಹೇಳಿದ್ದಾರೆ.