×
Ad

ಲೇಹ್‌ನಲ್ಲಿ 6ನೇ ದಿನವೂ ಮುಂದುವರಿದ ಕರ್ಫ್ಯೂ

Update: 2025-09-29 21:07 IST

Photo Credit: PTI

ಲೇಹ್, ಸೆ. 29: ಹಿಂಸಾಚಾರ ಪೀಡಿತ ಲೇಹ್‌ನಲ್ಲಿ 6ನೇ ದಿನವಾದ ಸೋಮವಾರ ಕೂಡ ಕರ್ಫ್ಯೂ ಮುಂದುವರಿದಿದೆ.

ಕರ್ಫ್ಯೂ ಹೇರಲಾದ ಪ್ರದೇಶಗಳಲ್ಲಿ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿದೆ. ಎಲ್ಲೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ನಿಗಾ ಇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರದ ಸಂದರ್ಭ ಮೃತಪಟ್ಟ ಸ್ಟೆಂಝಿನ್ ನಾಮ್‌ಗ್ಯಾಲ್ (24) ಹಾಗೂ ಜಿಗ್ಮತ್ ದೋರ್ಜೆ (25)ಯ ಅಂತ್ಯ ಸಂಸ್ಕಾರವನ್ನು ರವಿವಾರ ನಡೆಸಲಾಗಿದೆ. ಪಟ್ಟಣದಲ್ಲಿ ಹಿಂಸಾಚಾರ ನಡೆದ ಸಂದರ್ಭ ಸೆಪ್ಟಂಬರ್ 24ರಂದು ನಾಲ್ವರು ಸಾವನ್ನಪ್ಪಿದ್ದರು.

ಲೇಹ್ ಪಟ್ಟಣದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಕಾರ್ಗಿಲ್ ಸೇರಿದಂತೆ ಲಡಾಖ್‌ ನ ಪ್ರಮುಖ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ಪ್ರತಿಬಂಧಿಸುವ ನಿಷೇಧಾಜ್ಞೆ ಈಗಲೂ ಜಾರಿಯಲ್ಲಿದೆ.

ಲಡಾಖ್‌ ಗೆ ರಾಜ್ಯದ ಸ್ಥಾನ ಮಾನ ಹಾಗೂ ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸಿ ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಕರೆ ನೀಡಿದ್ದ ಬಂದ್‌ನ ಸಂದರ್ಭ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ಲೇಹ್‌ ನಲ್ಲಿ ಬುಧವಾರ ಕರ್ಫ್ಯೂ ಹೇರಲಾಗಿತ್ತು.

ಘರ್ಷಣೆಯಲ್ಲಿ ಸುಮಾರು 80 ಪೊಲೀಸ್ ಸಿಬ್ಬಂದಿ ಸೇರಿದಂತೆ 150ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇಬ್ಬರು ಕೌನ್ಸಿಲರ್‌ಗಳ ಸಹಿತ 60ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News