ಡಾಬರ್ ಇಂಡಿಯ ಉತ್ಪನ್ನಗಳಿಂದ ಕ್ಯಾನ್ಸರ್ ಆರೋಪ: ಅಮೆರಿಕ, ಕೆನಡಗಳಲ್ಲಿ ಮೊಕದ್ದಮೆ
Photo Credits: PTI
ಹೊಸದಿಲ್ಲಿ: ನಮ್ಮ ಮೂರು ವಿದೇಶಿ ಅಂಗ ಸಂಸ್ಥೆಗಳ ಉತ್ಪನ್ನಗಳು ಅಂಡಾಶಯ ಮತ್ತು ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಿವೆ ಎಂದು ಆರೋಪಿಸಿ ಅವುಗಳ ವಿರುದ್ಧ ಅಮೆರಿಕ ಮತ್ತು ಕೆನಡದ ಫೆಡರಲ್ ಮತ್ತು ರಾಜ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಲಾಗಿದೆ ಎಂದು ದಿನಬಳಕೆ ವಸ್ತುಗಳ ಉತ್ಪಾದಕ ಕಂಪೆನಿ ಡಾಬರ್ ಇಂಡಿಯ ಬುಧವಾರ ಹೇಳಿದೆ.
ಸುಮಾರು 5,400 ಪ್ರಕರಣಗಳು ದಾಖಲಾಗಿದ್ದು, ಡಾಬರ್ ಇಂಡಿಯದ ಅಂಗ ಸಂಸ್ಥೆಗಳಾದ ನಮಸ್ತೆ ಲ್ಯಾಬರೇಟರೀಸ್, ಡರ್ಮೊವಿವ ಸ್ಕಿನ್ ಎಸೆನ್ಶಿಯಲ್ಸ್ ಮತ್ತು ಡಾಬರ್ ಇಂಟರ್‌ನ್ಯಾಶನಲ್‌ಗಳನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ ಎಂದು ಬುಧವಾರ ಶೇರು ವಿನಿಮಯ ಕೇಂದ್ರಗಳಿಗೆ ನೀಡಿರುವ ಮಾಹಿತಿಯಲ್ಲಿ ಅದು ಹೇಳಿದೆ.
ಡಾಬರ್ ಇಂಡಿಯದ ಕೂದಲು ನಯಕಾರಕ ಉತ್ಪನ್ನಗಳು ಕೆಲವು ರಾಸಾಯನಿಕಗಳನ್ನು ಒಳಗೊಂಡಿದ್ದು, ಬಳಕೆದಾರರಲ್ಲಿ ಕ್ಯಾನ್ಸರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮೊಕದ್ದಮೆಗಳಲ್ಲಿ ಆರೋಪಿಸಲಾಗಿದೆ.
ಈ ಆರೋಪಗಳನ್ನು ತಾನು ಪ್ರಶ್ನಿಸಿದ್ದೇನೆ ಮತ್ತು ಕೆಲವು ಪ್ರಕರಣಗಳಲ್ಲಿ ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಕೋರಿದ್ದೇನೆ ಎಂದು ಡಾಬರ್ ಇಂಡಿಯ ಹೇಳಿದೆ.
ಗುರುವಾರ ಡಾಬರ್ ಇಂಡಿಯದ ಶೇರುಗಳ ಬೆಲೆ 2.25 ಶೇಕಡದಷ್ಟು ಕುಸಿದಿದೆ.