ರಾಜಸ್ಥಾನ | ನೀರಿನ ಪಾತ್ರೆ ಮುಟ್ಟಿದ ದಲಿತ ಬಾಲಕನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿತ
ಸಾಂದರ್ಭಿಕ ಚಿತ್ರ |hindustantimes
ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನೀರಿನ ಪಾತ್ರೆ ಮುಟ್ಟಿದ ಕಾರಣಕ್ಕೆ ಎಂಟು ವರ್ಷದ ದಲಿತ ಬಾಲಕನೋರ್ವನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಥಳಿಸಿರುವ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇತರ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಾಲಕನ ಮೇಲಿನ ಹಲ್ಲೆ ವೇಳೆ ಸಂತ್ರಸ್ತ ಬಾಲಕನ ತಾಯಿ ಪುರಿ ದೇವಿ ಮತ್ತು ಅಜ್ಜಿ ತಡೆಯಲು ಪ್ರಯತ್ನಿಸಿದ್ದು, ಈ ವೇಳೆ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ನನ್ನ ಪುತ್ರ ಭಖರ್ಪುರ ಗ್ರಾಮದಲ್ಲಿ ಆಟವಾಡುತ್ತಿದ್ದಾಗ, ನರನಾರಾಮ್ ಪ್ರಜಾಪತ್ ಮತ್ತು ದೇಮಾರಾಮ್ ಪ್ರಜಾಪತ್ ಸ್ನಾನಗೃಹ ಸ್ವಚ್ಛಗೊಳಿಸುವಂತೆ ಮತ್ತು ಕಸ ಸಂಗ್ರಹಿಸುವಂತೆ ಹೇಳಿದ್ದಾರೆ. ಮಗ ತನ್ನ ಕೆಲಸ ಮುಗಿಸಿ ಬಾಯಾರಿಕೆಯಿಂದ ನೀರು ಕುಡಿಯಲೆಂದು ನೀರಿನ ಪಾತ್ರೆ ಮುಟ್ಟಿದ ಕಾರಣಕ್ಕೆ ನರರಾಮ್ ನಿವಾಸಕ್ಕೆ ಕರೆದೊಯ್ದು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಹಲ್ಲೆ ನಡೆಸಿದ್ದಾರೆ" ಎಂದು ಬಾಲಕನ ತಾಯಿ ಪುರಿ ದೇವಿ ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕನನ್ನು ಕ್ರೂರವಾಗಿ ಥಳಿಸಿ ತಲೆಕೆಳಗಾಗಿ ನೇತುಹಾಕಿರುವುದನ್ನು ದೃಢಪಡಿಸಿದೆ. ಆದರೆ, ನೀರಿನ ಪಾತ್ರೆಯನ್ನು ಮುಟ್ಟಿದ ಕಾರಣ ಹಲ್ಲೆ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸುಖ್ರಾಮ್ ಬಿಷ್ಣೋಯ್ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), ಸೆಕ್ಷನ್ 127(2) ಮತ್ತು ಸೆಕ್ಷನ್ 137(2) ಮತ್ತು ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.