×
Ad

ಉನ್ನಾವೊ ಪ್ರಕರಣ| ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ಕುಲದೀಪ್ ಸೆಂಗಾರ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್

Update: 2026-01-19 16:24 IST

Credit: PTI photo

ಹೊಸದಿಲ್ಲಿ,ಜ.19: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಂದೆ ಪೋಲಿಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ನಾಯಕ ಕುಲದೀಪ್ ಸೆಂಗಾರ್‌ಗೆ ವಿಧಿಸಲಾಗಿರುವ 10 ವರ್ಷಗಳ ಶಿಕ್ಷೆಯನ್ನು ಅಮಾನತುಗೊಳಿಸಲು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ.

ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸೆಂಗಾರ್‌ಗೆ ದಿಲ್ಲಿ ಉಚ್ಚ ನ್ಯಾಯಾಲಯವು ಇತ್ತೀಚಿಗೆ ಜಾಮೀನು ಮಂಜೂರು ಮಾಡಿತ್ತಾದರೂ ಸರ್ವೋಚ್ಚ ನ್ಯಾಯಾಲಯವು ಅದಕ್ಕೆ ತಡೆ ನೀಡಿತ್ತು.

ಪರಿಹಾರವನ್ನು ಒದಗಿಸಲು ಯಾವುದೇ ಕಾರಣಗಳಿಲ್ಲ. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸೋಮವಾರ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ ನ್ಯಾ.ರವೀಂದ್ರ ದುಡೇಜಾ ಹೇಳಿದರು.

ಸೆಂಗಾರ್ ದೀರ್ಘ ಕಾಲ ಜೈಲು ವಾಸ ಅನುಭವಿಸಿದ್ದರೂ ವಿಳಂಬದ ಕಾರಣದಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಏಕೆಂದರೆ ಅವರು ತನ್ನ ದೋಷ ನಿರ್ಣಯದ ವಿರುದ್ಧ ತನ್ನ ಮೇಲ್ಮನವಿಯಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದು ವಿಳಂಬಕ್ಕೆ ಕಾರಣವಾಗಿದೆ ಎಂದು ಹೇಳಿದ ನ್ಯಾಯಾಧೀಶರು, ಮೇಲ್ಮನವಿಯ ವಿಚಾರಣೆಯನ್ನು ತ್ವರಿತವಾಗಿ ನಡೆಸಬೇಕಿದೆ ಎಂದರು.

ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆ.3ಕ್ಕೆ ನಿಗದಿಗೊಳಿಸಿದೆ.

ಕಸ್ಟಡಿಯಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣದಲ್ಲಿ ಮಾ.13, 2020ರಂದು ವಿಚಾರಣಾ ನ್ಯಾಯಾಲಯವು ಸೆಂಗಾರ್‌ಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 10 ಲಕ್ಷ ರೂ.ಗಳ ದಂಡವನ್ನು ವಿಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಸೆಂಗಾರ್‌ನ ಸೋದರ ಅತುಲ್ ಸಿಂಗ್ ಸೆಂಗಾರ್ ಮತ್ತು ಇತರ ಐವರಿಗೂ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು.

ಸೆಂಗಾರ್ ಸೂಚನೆಯ ಮೇರೆಗೆ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರಗಳ ಕಾಯ್ದೆಯಡಿ ಬಂಧಿಸಲಾಗಿತ್ತು ಮತ್ತು ಕಸ್ಟಡಿಯಲ್ಲಿ ಪೋಲಿಸರ ದೌರ್ಜನ್ಯಗಳಿಂದಾಗಿ ಅವರು ಎ.9, 2018ರಂದು ಮೃತಪಟ್ಟಿದ್ದರು. ಸೆಂಗಾರ್ 2017ರಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.

ಅತ್ಯಾಚಾರ ಮತ್ತು ಸಂತ್ರಸ್ತೆಯ ತಂದೆಯ ಸಾವಿನ ಪ್ರಕರಣಗಳಲ್ಲಿ ತನ್ನ ದೋಷ ನಿರ್ಣಯ ಮತ್ತು ಶಿಕ್ಷೆಯ ವಿರುದ್ಧ ಸೆಂಗಾರ್ ಸಲ್ಲಿಸಿರುವ ಮೇಲ್ಮನವಿಗಳು ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿವೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News