ಎಲಾನ್ ಮಸ್ಕ್ ಟೆಸ್ಲಾಗೆ ಲೋಕಲ್ ಟೆಸ್ಲಾ EV ತಲೆನೋವು! : ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಯುಎಸ್ ಟೆಸ್ಲಾ
PC : aljazeera.com
ಹೊಸದಿಲ್ಲಿ: ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ರ ವಿಶ್ವ ವಿಖ್ಯಾತ ‘ಟೆಸ್ಲಾ’ ಬ್ರ್ಯಾಂಡ್ ಹೆಸರಲ್ಲಿ ಸ್ಥಾಪನೆಯಾಗಿದ್ದ ಭಾರತೀಯ ಮೂಲದ ಟೆಸ್ಲಾ ಪವರ್ ಇಂಡಿಯಾ ಸಂಸ್ಥೆಯ ಸಿಇಒಗೆ ಮುಂದಿನ ಆದೇಶದವರೆಗೂ ಆ ಹೆಸರನ್ನು ದುರ್ಬಳಕೆ ಮಾಡಬಾರದು ಅಥವಾ ಅದೇ ಹೆಸರಿನಲ್ಲಿ ಮರೆಮಾಚಿದ ರೀತಿಯಲ್ಲಿ ಬ್ರಾಂಡಿಂಗ್ ಮಾಡಬಾರದು ಎಂದು ದಿಲ್ಲಿ ಹೈಕೋರ್ಟ್ ನಿರ್ದೇಶನ ನೀಡಿದ್ದು, ಟ್ರೇಡ್ ಮಾರ್ಕ್ ಹಕ್ಕು ಸ್ವಾಮ್ಯ ಕುರಿತು ಅರ್ಜಿ ಸಲ್ಲಿಸಿದ್ದ ಎಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಕಂಪೆನಿಗೆ ತಾತ್ಕಾಲಿಕ ಉಪಶಮನ ನೀಡಿದೆ ಎಂದು barandbench.com ವರದಿ ಮಾಡಿದೆ.
ಟೆಸ್ಲಾ ಪವರ್ ಇಂಡಿಯಾ ಸಂಸ್ಥೆಯು ನಮ್ಮ ಟೆಸ್ಲಾ ಟ್ರೇಡ್ ಮಾರ್ಕ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ EV ಮಾರುಕಟ್ಟೆಗೆ ಪ್ರವೇಶಿಸಲಾಗುವುದು ಎಂದು ಪ್ರಕಟನೆ ನೀಡಿದೆ ಎಂದು ಉಲ್ಲೇಖಿಸಿ ಮೇ 2024ರಲ್ಲಿ ಟೆಸ್ಲಾ ಇಂಕ್ ಸಂಸ್ಥೆ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಟೆಸ್ಲಾ ಪವರ್ ಇಂಡಿಯಾ ತನ್ನ ನಡೆಯ ಕುರಿತು ಪತ್ರಿಕಾ ಜಾಹೀರಾತುಗಳನ್ನು ಬಿಡುಗಡೆ ಮಾಡಿದೆ ಎಂದೂ ಈ ಅರ್ಜಿಯಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ಎಪ್ರಿಲ್ 2022ರಲ್ಲಿ ಟೆಸ್ಲಾ ಪವರ್ ಇಂಡಿಯಾ ಹಾಗೂ ಅದರ ಸಹ ಸಂಸ್ಥೆ ಟೆಸ್ಲಾ ಪವರ್ ಯುಎಸ್ಎಗೆ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಮುಟ್ಟುಗೋಲು ನೋಟಿಸ್ ಅನ್ನು ಜಾರಿಗೊಳಿಸಲಾಗಿತ್ತು. ಹೀಗಿದ್ದೂ, ಟೆಸ್ಲಾ ಪವರ್ ಇಂಡಿಯಾ ತಾನು ಟೆಸ್ಲಾ ಟ್ರೇಡ್ ಮಾರ್ಕ್ ಬಳಸಿಕೊಂಡು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವುದಾಗಿ ಪ್ರಕಟಿಸಿದೆ ಎಂದು ಎಲಾನ್ ಮಸ್ಕ್ ರ ಟೆಸ್ಲಾ ಕಂಪೆನಿ ವಾದಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ತೇಜಸ್ ಕಾರಿಯಾ, ಅಂತಿಮ ಆದೇಶದವರೆಗೂ ಟೆಸ್ಲಾ ಟ್ರೇಡ್ ಮಾರ್ಕ್ ಅನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲಿ ಅಥವಾ ಅದೇ ಹೆಸರಿನಲ್ಲಿ ಮರೆಮಾಚಿದ ರೀತಿಯಲ್ಲಿ ಬ್ರಾಂಡಿಂಗ್ ಮಾಡುವುದಾಗಲಿ ಮಾಡಕೂಡದು ಎಂದು ಟೆಸ್ಲಾ ಪವರ್ ಇಂಡಿಯಾಗೆ ಸೂಚಿಸಿದ್ದಾರೆ.
ಟೆಸ್ಲಾ ಇಂಕ್ ಪರ ವಕೀಲರಾದ ನ್ಯಾನ್ಸಿ ರಾಯ್, ರಾಘವ್ ಮಲಿಕ್, ಪ್ರಕೃತಿ ವರ್ಷಿಣಿ, ಲಲಿತ್ ಅಲ್ಲೆ ಹಾಗೂ ಪ್ರಶಾಂತ್ ರೊಂದಿಗೆ ಹಿರಿಯ ವಕೀಲ ಚಂದರ್ ಎಂ. ಲಾಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರೆ, ಟೆಸ್ಲಾ ಪವರ್ ಇಂಡಿಯಾ ಪರವಾಗಿ ವಕೀಲರಾದ ಸಿದ್ಧಾಂತ್ ಗೋಯೆಲ್ ಮತ್ತು ಮೋಹಿತ್ ಗೋಯೆಲ್ ರೊಂದಿಗೆ ಹಿರಿಯ ವಕೀಲ ಸಾಯಿ ದೀಪಕ್ ಪ್ರತಿವಾದ ಮಂಡಿಸಿದರು.