ಕೇರಳ | ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಣೆ : ಆರೆಸ್ಸೆಸ್ ಕಾರ್ಯಕರ್ತ ಆತ್ಮಹತ್ಯೆ : ವರದಿ
Photo | NDTV
ತಿರುವನಂತಪುರಂ : ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ತೃಕ್ಕಣ್ಣಾಪುರದ ಆನಂದ್ ಕೆ ಥಂಪಿ ತನ್ನ ಮನೆಯ ಆವರಣದಲ್ಲಿರುವ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಿರುವನಂತಪುರಂ ಕಾರ್ಪೊರೇಷನ್‌ನ ತೃಕ್ಕಣ್ಣಾಪುರಂ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಥಂಪಿ ಬಯಸಿದ್ದರು. ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ಇದರಿಂದ ಅವರು ಅಸಮಾಧಾನಗೊಂಡಿದ್ದರು ಎಂದು ತಿಳಿದು ಬಂದಿದೆ. ನಂತರ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಅವರು ಆರೆಸ್ಸೆಸ್ ನಾಯಕರ ವಿರುದ್ಧ ಆರೋಪಗಳನ್ನು ಹೊರಿಸಿ ವಾಟ್ಸಾಪ್ ಸ್ಟೇಟಸ್ ಪೋಸ್ಟ್ ಮಾಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಮರಳು ಕಳ್ಳಸಾಗಣೆ ಮಾಫಿಯಾದೊಂದಿಗೆ ಸಂಬಂಧ ಹೊಂದಿರುವ ಕೆಲವು ಸ್ಥಳೀಯ ನಾಯಕರ ಹಿತಾಸಕ್ತಿಗಳಿಂದಾಗಿ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ, ಜೊತೆಗಿದ್ದವರು ನನ್ನಿಂದ ದೂರವಾಗಲು ಪ್ರಾರಂಭಿಸಿದರು ಎಂದು ಅವರು ಹೇಳಿಕೊಂಡಿರುವ ಬಗ್ಗೆ ವರದಿಯಾಗಿದೆ.
ಆದರೆ ಸ್ಥಳೀಯ ಬಿಜೆಪಿ ನಾಯಕರು ಈ ಆರೋಪವನ್ನು ನಿರಾಕರಿಸಿದ್ದಾರೆ. ಆನಂದ್ ಕೆ ಥಂಪಿ ಟಿಕೆಟ್ ಕೋರಿ ನಮ್ಮನ್ನು ಸಂಪರ್ಕಿಸಿಲ್ಲ. ಅವರ ಸಾವನ್ನು ಟಿಕೆಟ್ ನಿರಾಕರಣೆ ಜೊತೆ ಸಂಬಂಧ ಕಲ್ಪಿಸಬಾರದು ಎಂದು ಹೇಳಿದ್ದಾರೆ.