×
Ad

ಮಹಾರಾಷ್ಟ್ರ ಶಿವಸೇನೆ ಶಾಸಕನಿಂದ ಕ್ಯಾಂಟೀನ್ ನೌಕರನಿಗೆ ಹಲ್ಲೆ: ಸಿಎಂ ಫಡ್ನವೀಸ್ ಖಂಡನೆ

Update: 2025-07-09 16:53 IST

ಮುಂಬೈ: ಇಲ್ಲಿಯ ಆಕಾಶವಾಣಿ ಶಾಸಕರ ಭವನದ ಕ್ಯಾಂಟೀನ್ ನೌಕರನ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಶಿವಸೇನೆ ಶಾಸಕ ಸಂಜಯ ಗಾಯಕ್ವಾಡ್ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಬುಧವಾರ ಕಟುವಾಗಿ ಖಂಡಿಸಿದ್ದಾರೆ.

ಇಂತಹ ವರ್ತನೆಯು ಸರಿಯಾದ ಸಂದೇಶವನ್ನು ರವಾನಿಸುವುದಿಲ್ಲ. ಇದು ರಾಜ್ಯ ವಿಧಾನಸಭೆಯ ಮತ್ತು ಓರ್ವ ಶಾಸಕನಾಗಿ ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಫಡ್ನವೀಸ್ ಹೇಳಿದರು. ಗಾಯಕ್ವಾಡ್ ಕ್ಯಾಂಟೀನ್ ನೌಕರನಿಗೆ ಕಪಾಳಮೋಕ್ಷ ಮಾಡಿದ ಮತ್ತು ಮುಷ್ಟಿಯಿಂದ ಗುದ್ದಿದ ವೀಡಿಯೊ ವೈರಲ್ ಆಗಿದೆ.

ಶಿವಸೇನೆ(ಯುಬಿಟಿ) ಶಾಸಕ ಅನಿಲ್ ಪರಬ್ ಅವರು ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಫಡ್ನವೀಸ್,ಇಂತಹ ಸಮಸ್ಯೆಗಳ ಬಗ್ಗೆ ಯಾರೇ ಆದರೂ ಔಪಚಾರಿಕವಾಗಿ ದೂರು ಸಲ್ಲಿಸಬಹುದು ಮತ್ತು ಆ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು.

ಶಾಸಕರ ಭವನದಲ್ಲಿಯ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ವಿಧಾನ ಪರಿಷತ್ ಸಭಾಪತಿ ರಾಮ ಶಿಂದೆ ಅವರನ್ನು ಕೋರಿಕೊಂಡ ಫಡ್ನವೀಸ್, ಅಲ್ಲಿ ಸಮಸ್ಯೆಗಳಿದ್ದರೆ ಪರಿಹಾರ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಜನಪ್ರತಿನಿಧಿಯಿಂದ ಹಲ್ಲೆಯು ಸರಿಯಾದ ಸಂದೇಶವನ್ನು ರವಾನಿಸುವುದಿಲ್ಲ. ಇದು ಗಂಭೀರ ವಿಷಯವಾಗಿದೆ. ನೀವು(ಶಿವಸೇನೆ ಮುಖ್ಯಸ್ಥ ಏಕನಾಥ ಶಿಂದೆ) ಮತ್ತು ಸ್ಪೀಕರ್ ರಾಹುಲ್ ನಾರ್ವೇಕರ್ ಇದನ್ನು ಗಮನಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ತನ್ನ ಕೋಣೆಗೆ ಪೂರೈಸಲಾಗಿದ್ದ ಊಟದಲ್ಲಿ ಹಳಸಿದ ದಾಲ್ ಮತ್ತು ಅನ್ನವನ್ನು ನೀಡಲಾಗಿದೆ ಎಂದು ಗಾಯಕ್ವಾಡ್ ಆರೋಪಿಸಿದ ಬಳಿಕ ಕೋಲಾಹಲ ಸೃಷ್ಟಿಯಾಗಿತ್ತು. ಸಿಟ್ಟಿನಿಂದ ಕ್ಯಾಂಟೀನ್‌ಗೆ ತೆರಳಿದ್ದ ಅವರು ದಾಲ್ ಪ್ಯಾಕೆಟ್‌ನ್ನು ಮೂಸಿ ನೋಡುವಂತೆ ನೌಕರನಿಗೆ ಬಲವಂತಗೊಳಿಸಿದ್ದರು. ಬಳಿಕ ಆತನಿಗೆ ಕಪಾಳಮೋಕ್ಷ ಮಾಡಿ ಮುಷ್ಟಿಯಿಂದ ಗುದ್ದಿದ್ದ ಗಾಯಕ್ವಾಡ್ ಇತರ ಸಿಬ್ಬಂದಿಗಳ ಮೇಲೂ ಹಲ್ಲೆ ನಡೆಸಿದ್ದನ್ನು ವೀಡಿಯೊ ತೋರಿಸಿದೆ.

ಘಟನೆಯ ಕುರಿತು ಸುದ್ದಿಸಂಸ್ಥೆ ಜೊತೆ ಮಾತನಾಡಿದ ಗಾಯಕ್ವಾಡ್, ‘ಉತ್ತಮ ಗುಣಮಟ್ಟದ ಆಹಾರವನ್ನು ನೀಡುವಂತೆ ನಾನು ಕ್ಯಾಂಟೀನ್ ಸಿಬ್ಬಂದಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಅದಕ್ಕೆ ಅವರು ಕಿವಿಗೊಟ್ಟಿಲ್ಲ. ನಾನು ಕಳೆದ 30 ವರ್ಷಗಳಿಂದಲೂ ಆಕಾಶವಾಣಿ ಕ್ಯಾಂಟೀನ್‌ಗೆ ಬರುತ್ತಿದ್ದು, ಐದೂವರೆ ವರ್ಷಗಳಿಂದ ಇಲ್ಲಿಯೇ ವಾಸವಿದ್ದೇನೆ. ಇಲ್ಲಿ ಮೊಟ್ಟೆಗಳು 15 ದಿನ, ಮಾಂಸಾಹಾರ 15-20 ದಿನ ಮತ್ತು ತರಕಾರಿಗಳು 2ರಿಂದ 4 ದಿನಗಳಷ್ಟು ಹಳೆಯದಾಗಿರುತ್ತವೆ. ಇಲ್ಲಿ ಸುಮಾರು ಐದರಿಂದ ಹತ್ತು ಸಾವಿರ ಜನರು ಊಟ ಮಾಡುತ್ತಾರೆ ಮತ್ತು ಪ್ರತಿಯೊಬ್ಬರದೂ ಇದೇ ದೂರು ಆಗಿದೆ. ಆಹಾರದಲ್ಲಿ ಹಲ್ಲಿ,ಇಲಿ ಇರುವುದು ಸಾಮಾನ್ಯವಾಗಿಬಿಟ್ಟಿದೆ ’ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News