58 ಕೋಟಿ ರೂ. ‘ಡಿಜಿಟಲ್ ಎರೆಸ್ಟ್’ಪ್ರಕರಣ | ಚೀನಾ, ಹಾಂಗ್ ಕಾಂಗ್, ಇತರ ದೇಶಗಳೊಂದಿಗೆ ನಂಟು ಹೊಂದಿರುವ ಅಂತರರಾಷ್ಟ್ರೀಯ ಜಾಲ ಪತ್ತೆ
ಸಾಂದರ್ಭಿಕ ಚಿತ್ರ | Photo Credit : freepik
ಮುಂಬೈ, ನ. 12: ಮುಂಬೈಯಲ್ಲಿ ನಡೆದ 58 ಕೋಟಿ ರೂ. ‘ಡಿಜಿಟಲ್ ಎರೆಸ್ಟ್’ ವಂಚನೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸೈಬರ್ ಇಲಾಖೆ ನಡೆಸುತ್ತಿದೆ. ತನಿಖೆಯಲ್ಲಿ ಚೀನಾ, ಹಾಂಗ್ ಕಾಂಗ್ ಹಾಗೂ ಇಂಡೋನೇಷ್ಯಾ ಜೊತೆ ಸಂಪರ್ಕ ಹೊಂದಿರುವ ಅಂತರರಾಷ್ಟ್ರೀಯ ಜಾಲ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಅತಿ ದೊಡ್ಡ ‘ಡಿಜಿಟಲ್ ಎರೆಸ್ಟ್’ ಹಗರಣವೊಂದರಲ್ಲಿ ಸೈಬರ್ ವಂಚಕರು ಮುಂಬೈ ಉದ್ಯಮಿಯೊಬ್ಬರಿಗೆ 58 ಕೋಟಿ ರೂ. ವಂಚಿಸಿದ್ದಾರೆ. ಈ ವರ್ಷ ಆಗಸ್ಟ್ 19 ಹಾಗೂ ಅಕ್ಟೋಬರ್ 8ರ ನಡುವೆ ಅವರು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಂತೆ ಸೋಗು ಹಾಕಿ ವಂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಗರಣ ಕ್ರಿಪ್ಟೋ ಕರೆನ್ಸಿ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ಕದ್ದ ಹಣವನ್ನು ಹಲವಾರು ಕ್ರಿಪ್ಟೋ ವಾಲೆಟ್ ಗಳನ್ನು ಬಳಸಿಕೊಂಡು ವಿದೇಶಕ್ಕೆ ಕಳುಹಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಗುಂಪು ಹಲವಾರು ಕಮಿಷನ್ ಆಧರಿತ ಬ್ಯಾಂಕ್ ಖಾತೆಗಳನ್ನು ಬಳಸುತ್ತಿತ್ತು ಎಂದು ತನಿಖಾಧಿಕಾರಿಗಳು ಕಂಡು ಕೊಂಡಿದ್ದಾರೆ.
ಸಿಬಿಐ ಅಧಿಕಾರಿಯೆಂದು ಪ್ರತಿಪಾದಿಸಿದ ವ್ಯಕ್ತಿಯಿಂದ ದೂರವಾಣಿ ಕರೆ ಬಂದಿದೆ ಎಂದು ಉದ್ಯಮಿಯೋರ್ವರು ದೂರು ದಾಖಲಿಸಿದ ಬಳಿಕ ಈ ವಂಚನೆ ಬೆಳಕಿಗೆ ಬಂದಿದೆ.
ಕರೆ ಮಾಡಿದ ವ್ಯಕ್ತಿ ಇದು ವಿಚಾರಣೆಯ ಅಧಿಕೃತ ಭಾಗ ಎಂದು ಹೇಳಿದ ಹಾಗೂ ವೀಡಿಯೊ ಕರೆಯಲ್ಲಿ ಪಾಲ್ಗೊಳ್ಳುವಂತೆ ಬೆದರಿಕೆ ಒಡ್ಡಿದ. ಕರೆಯ ಸಂದರ್ಭ ವಂಚಕರು ಅವರ ಖಾತೆಯಿಂದ 58 ಕೋಟಿ ರೂ. ದೋಚುವುದರಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯ ಸಂದರ್ಭ ಸೈಬರ್ ಪೊಲೀಸರು ಇದು ಒಂದೇ ಪ್ರಕರಣವಲ್ಲ. ಇದು ಒಂದು ವರ್ಷಕ್ಕೂ ಅಧಿಕ ಕಾಲ ಭಾರತೀಯ ನಾಗರಿಕರನ್ನು ಗುರಿಯಾಗಿರಿಸಿಕೊಂಡಿರುವ ಅತಿ ದೊಡ್ಡ ಅಂತರರಾಷ್ಟ್ರೀಯ ಗುಂಪಿನ ಭಾಗವಾಗಿದೆ ಎಂದು ಕಂಡು ಕೊಂಡಿದ್ದಾರೆ.