×
Ad

ಪ್ರಚಾರಕ್ಕಾಗಿ 'ಆಪರೇಷನ್ ಸಿಂಧೂರ್' ಬಳಸಿಕೊಂಡ ವೈದ್ಯ; ಆಸ್ಪತ್ರೆಯಿಂದ ಕ್ರಮ

Update: 2025-05-18 12:11 IST

Photo credit: X

ರಾಯ್‌ಪುರ: 'ಆಪರೇಷನ್ ಸಿಂಧೂರ್' ಬಗ್ಗೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಬಳಸಿದ್ದ "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ" ಎಂಬ ಸಾಲನ್ನು, ಛತ್ತೀಸ್‌ಗಢದ ವೈದ್ಯರೊಬ್ಬರು ತಮ್ಮ ವೃತ್ತಿಪರ ಸೇವೆಗಳನ್ನು ಪ್ರಚಾರ ಮಾಡಲು ಬಳಸಿ ವಿವಾದಕ್ಕೊಳಗಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ನಂತರ, ಭಿಲಾಯಿ ಮೂಲದ ಮೂತ್ರಶಾಸ್ತ್ರಜ್ಞ ವೈದ್ಯ ರನ್ನು ಅಶಿಸ್ತಿನ ಕಾರಣಕ್ಕೆ ಅಮಾನತುಗೊಳಿಸಲಾಗಿದೆ.

ಶ್ರೀ ಶಂಕರಾಚಾರ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶಿವೇಂದ್ರ ಸಿಂಗ್ ತಿವಾರಿ ಅವರು ಅಮಾನತುಗೊಂಡ ವೈದ್ಯರು ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ವೈದ್ಯಕೀಯ ಕ್ಲಿನಿಕ್ ನ ಪ್ರಚಾರದ ಭಾಗವಾಗಿ ಅವರು ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ನಲ್ಲಿ ಅವರು ಪ್ರಧಾನಿಯವರ ಹೇಳಿಕೆಯನ್ನು ಅವರು ಜಾಣತನದಿಂದ ಪೋಣಿಸಿದ್ದಾರೆ. "ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಮೂತ್ರದಲ್ಲಿ ರಕ್ತವನ್ನು ನೋಡಿದರೆ, ತಕ್ಷಣ ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಅದು ಗಂಭೀರವಾಗಿರಬಹುದು," ಎಂದು ಹೇಳಿರುವುದು ವಿವಾದಕ್ಕೆ ನಾಂದಿ ಹಾಡಿದೆ.

'ಆಪರೇಷನ್ ಸಿಂಧೂರ್' ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾಡಿದ್ದ ಉಲ್ಲೇಖವನ್ನು ಬಳಸಿರುವುದು ಅವರಿಗೆ ಉರುಳಾಗಿ ಪರಿಣಮಿಸಿದೆ.

ಈ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಯು ಉನ್ನತ ಸಮಿತಿಯನ್ನು ರಚಿಸಿದೆ. ವೈದ್ಯರನ್ನು 15 ದಿನಗಳವರೆಗೆ ಅಮಾನತುಗೊಳಿಸಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಜಾಹೀರಾತು ಮೂತ್ರಶಾಸ್ತ್ರದ ಆರೋಗ್ಯವನ್ನು ಉತ್ತೇಜಿಸುವ ಪ್ರಯತ್ನವಾಗಿದೆ. ವೈದ್ಯರು ರೋಗಿಗಳ ವೃತ್ತಿಪರ ಆರೈಕೆಯನ್ನು ವಿಸ್ತರಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಬಹುದು. ಆದರೆ ಪ್ರಧಾನ ಮಂತ್ರಿಯವರ ಹೇಳಿಕೆಯನ್ನು ಸ್ವಯಂ ಪ್ರಚಾರಕ್ಕಾಗಿ ಬಳಸುವುದು ನ್ಯಾಯಸಮ್ಮತವಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ಕುರಿತು ಆಸ್ಪತ್ರೆಯ ಡೀನ್ ಅಮಾನತು ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News