ಜವಾನ್ ಮೆಚ್ಚಿ ಶಾರುಖ್ ಖಾನ್ ಗೆ ಭಾವನಾತ್ಮಕ ಪತ್ರ ಬರೆದ ಡಾ.ಕಫೀಲ್ ಖಾನ್….
ಡಾ. ಕಫೀಲ್ ಖಾನ್
ಮುಂಬೈ : ಶಾರುಖ್ ಖಾನ್ ಅವರ ಇತ್ತೀಚಿನ ಚಲನಚಿತ್ರ "ಜವಾನ್" ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಗೋರಖ್‌ಪುರದ ಮೆಡಿಕಲ್ ಕಾಲೇಜಿನ ಮಾಜಿ ಸಹಾಯಕ ಪ್ರಾಧ್ಯಾಪಕ ಡಾ. ಕಫೀಲ್ ಖಾನ್ ಅವರು ಪತ್ರ ಬರೆದಿದ್ದಾರೆ.
ಈ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣ x ನಲ್ಲಿ ವೈರಲ್ ಆಗಿದೆ. ಶಾರುಖ್ ಖಾನ್ ಅವರೇ ನಿಮ್ಮ ಜವಾನ್ ನೋಡಿದ ಬಳಿಕ ನಾನು ನಿಮಗೆ ಸುಧೀರ್ಘ ಪತ್ರವೊಂದನ್ನು ಬರೆದಿದ್ದೆ. ಅದನ್ನು ನಿಮಗೆ ಕಳುಹಿಸಲು ನಿಮ್ಮ ಈ ಮೇಲ್ ಐಡಿ ನನ್ನಲ್ಲಿರಲಿಲ್ಲ. ಅದಕ್ಕಾಗಿ ಅದನ್ನು ಅಂಚೆಯ ಮೂಲಕ ಕಳುಹಿಸಿದ್ದೇನೆ. ಆದರೆ ಆ ಪತ್ರ ಇನ್ನೂ ನಿಮಗೆ ತಲುಪದೇ, ರವಾನೆಯಲ್ಲಿದೆ ಎಂದು ತಿಳಿದು ಬಂತು. ಹಾಗಾಗಿ ಆ ಪತ್ರವನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ ಎಂದು ಕಫೀಲ್ ಖಾನ್ ಬರೆದ ಭಾವನಾತ್ಮಕ ಪತ್ರ ನೆಟ್ಟಿಗರ ಗಮನ ಸೆಳೆದಿದೆ.
ಗೋರಖ್‌ಪುರದ ದುರಂತ ಘಟನೆಯ ಕುರಿತು ಶಾರುಕ್ ನಟನೆಯ ಜವಾನ್ ನಲ್ಲಿ ಬೆಳಕು ಚೆಲ್ಲಲಾಗಿದೆ. ಸಾಮಾಜಿಕ-ರಾಜಕೀಯ ವಿಷಯಗಳ ಮೇಲೆ ವಿಮರ್ಶಾತ್ಮಕ ಬೆಳಕು ಚೆಲ್ಲಲು ಸಿನೆಮಾವನ್ನು ಪ್ರಬಲ ಮಾಧ್ಯಮವಾಗಿ ಬಳಸಿಕೊಳ್ಳುವ ಶಾರುಖ್ ಖಾನ್ ಅವರ ಬದ್ಧತೆಯನ್ನು ಡಾ.ಖಾನ್ ತಮ್ಮ ಪತ್ರದಲ್ಲಿ ಶ್ಲಾಘಿಸಿದ್ದಾರೆ. ಆರೋಗ್ಯ ವ್ಯವಸ್ಥೆಯಲ್ಲಿ ತುರ್ತುಸ್ಥಿತಿಯನ್ನು ಜವಾಬ್ದಾರಿಯುವಾಗಿ ನಿರ್ವಹಿಸುವ ಕುರಿತು "ಜವಾನ್" ಶಕ್ತಿಯುತ ಸಂದೇಶ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಜವಾನ್" ಒಂದು ಕಾಲ್ಪನಿಕ ಚಿತ್ರವಾಗಿದ್ದರೂ ಘೋರಖ್ ಪುರ ಘಟನೆಗೆ ಸಾಮ್ಯತೆಯಿರುವ ಕೃತಿ ಎಂದಿರುವ ಡಾ. ಕಫೀಲ್ ಖಾನ್, ಚಿತ್ರದಲ್ಲಿರುವ ಡಾ. ಈರಂ ಖಾನ್ ಪಾತ್ರವನ್ನು ಪ್ರಶಂಸಿಸಿದ್ದಾರೆ. ಇದು ನನ್ನ ಸ್ವಂತ ಅನುಭವಗಳೊಂದಿಗೆ ಪ್ರತಿಧ್ವನಿಸಿತು ಎಂದಿರುವ ಕಫೀಲ್ ಅವರು, ಗೋರಖ್‌ಪುರ ಆಸ್ಪತ್ರೆ ದುರಂತದ ನೈಜ ಅಪರಾಧಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಪೋಷಕರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಡಾ. ಕಫೀಲ್ ಖಾನ್ ಅವರು ತಮ್ಮ "ದಿ ಗೋರಖ್‌ಪುರ ಹಾಸ್ಪಿಟಲ್ ಟ್ರಾಜಿಡಿ" ಪುಸ್ತಕವನ್ನು ಉಲ್ಲೇಖಿಸಿ, ಈ ಪುಸ್ತಕವು ದುರಂತ ಮತ್ತು ಅದರ ನಂತರದ ಘಟನೆಗಳ ಸಮಗ್ರ ಚಿತ್ರಣ ಒದಗಿಸುತ್ತದೆ. ಚಲನಚಿತ್ರದ ಕಥಾವಸ್ತುವಿನ ಸಮಾನಾಂತರ ಅಂಶಗಳು ಪುಸ್ತಕದಲ್ಲಿದೆ ಎಂದಿದ್ದಾರೆ. ಡಾ. ಕಫೀಲ್ ಖಾನ್ ಅವರು ಶಾರುಖ್ ಖಾನ್, ನಿರ್ದೇಶಕ ಅಟ್ಲಿ ಮತ್ತು ಚಿತ್ರದ ತಂಡದ ಇತರ ಸದಸ್ಯರನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಗೋರಖ್‌ಪುರ ದುರಂತವನ್ನು ಬೆಳಕಿಗೆ ತರಲು ಮತ್ತು ಭಾರತದಲ್ಲಿ ಆರೋಗ್ಯ ಕ್ಷೇತ್ರದ ಕುರಿತು ಬೆಳಕು ಚೆಲ್ಲಲು ಅವರು ಮಾಡಿದ ಪ್ರಯತ್ನಗಳಿಗೆ ವೈಯಕ್ತಿಕವಾಗಿ ಕೃತಜ್ಞತೆಯನ್ನು ತಿಳಿಸುವ ಉದ್ದೇಶ ತನಗಿದೆ ಎಂದು ಉಲ್ಲೇಖಿಸಿದ್ದಾರೆ.