ವಿಶ್ವಾದ್ಯಂತ ಸಾವಿರ ಕೋಟಿ ಗಳಿಕೆಯ ಮೈಲುಗಲ್ಲು ದಾಟಿದ 'ಧುರಂದರ್'
ಧುರಂಧರ್ ಚಿತ್ರ | Photo Credit ; bookmyshow.com
ಮುಂಬೈ: ಆದಿತ್ಯ ಧರ್ ನಿರ್ದೇಶನದಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಧುರಂಧರ್' ಚಿತ್ರದ ಗಳಿಕೆ ವಿಶ್ವಾದ್ಯಂತ 1000 ಕೋಟಿ ರೂಪಾಯಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ಚಲನಚಿತ್ರ ಬಿಡುಗಡೆಯಾಗಿ ನಾಲ್ಕನೇ ವಾರದಲ್ಲೇ ಈ ಐತಿಹಾಸಿಕ ಮೈಲುಗಲ್ಲು ದಾಟಿರುವುದು ಗಮನಾರ್ಹ. ಡಿಸೆಂಬರ್ 5ರಂದು ಬಿಡುಗಡೆಯಗಿದ್ದ ಚಿತ್ರ ಭಾರತೀಯ ಸಿನಿಮಾ ಜಗತ್ತಿನ ಅತಿದೊಡ್ಡ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ.
ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯ ನಾಗಾಲೋಟ ಮುಂದುವರಿಸಿರುವ ಚಿತ್ರ 22ನೇ ದಿನ ಸುಮಾರು 15 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಸ್ಕ್ಯಾನ್ಲಿಕ್ ಅಂದಾಜಿಸಿದೆ. ನಾಲ್ಕನೇ ವಾರಾಂತ್ಯದಲ್ಲಿ ಯಾವುದೇ ಚಿತ್ರಕ್ಕೆ ಇದು ಅತ್ಯುತ್ತಮ ಸಂಗ್ರಹ ಎಂದು ವಿಶ್ಲೇಷಿಸಿದೆ. ಮೊದಲ ವಾರ 207.25 ಕೋಟಿ ರೂಪಾಯಿ ಗಳಿಸಿದ್ದ 'ಧುರಂಧರ್' ಎರಡನೇ ವಾರದಲ್ಲಿ 253.25 ಕೋಟಿ, ಮೂರನೇ ವಾರ 173 ಕೋಟಿ ರೂಪಾಯಿ ಗಳಿಸಿದೆ. ಶುಕ್ರವಾರದ ಗಳಿಕೆಯೊಂದಿಗೆ ಚಿತ್ರದ ಗಳಿಕೆ 648.50 ಕೋಟಿ ರೂಪಾಯಿ ತಲುಪಿದೆ. ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕ 778 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಕೂಡಾ ಸದ್ದು ಮಾಡಿರುವ 'ಧುರಂಧರ್'ನ ಗಳಿಕೆ ಹೊರದೇಶಗಳಲ್ಲಿ 225 ಕೋಟಿ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿರುವ ಚಿತ್ರಗಳ ಸಾಲಿನಲ್ಲಿ 'ಧುರಂಧರ್' ಅಗ್ರಗಣ್ಯ ಎಂದು ಹೇಳಲಾಗುತ್ತಿದೆ. ವಿಶ್ವಾದ್ಯಂತ 'ಧುರಂಧರ್' ಗಳಿಕೆ 1003 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕೇವಲ 22 ದಿನಗಳಲ್ಲಿ 1000 ಕೋಟಿ ರೂಪಾಯಿ ಮೈಲುಗಲ್ಲು ದಾಟಿರುವ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ಧುರಂಧರ್ ಪಾತ್ರವಾಗಿದೆ. 2023ರಲ್ಲಿ ಶಾರೂಖ್ ಖಾನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಜವಾನ್' ಚಿತ್ರ ಕೇವಲ 18 ದಿನಗಳಲ್ಲಿ ಈ ಮೈಲಗಲ್ಲು ದಾಟಿತ್ತು. ಆದರೆ 'ಧುರಂಧರ್' ಚಿತ್ರ ಎ ರೇಟಿಂಗ್ ಪಡೆದಿರುವುದರಿಂದ ಕೇವಲ ವಯಸ್ಕರಿಗೆ ಮಾತ್ರ ಸೀಮಿತವಾಗಿರುವುದು ಗಮನಾರ್ಹ.