Fact Check| ದುಬೈಯ ಬುರ್ಜ್ ಖಲೀಫಾ ಬಳಿ ಬೃಹತ್ ಸಾಂತಾಕ್ಲಾಸ್ ಡ್ರೋನ್ ಶೋ ನಡೆದಿದ್ಯಾ? ವಾಸ್ತವವೇನು?
ಡ್ರೋನ್ ಶೋ ವೀಡಿಯೊ ಹಂಚಿಕೊಂಡಿದ್ದ ಎಲಾನ್ ಮಸ್ಕ್!
Photo| khaleejtimes
ದುಬೈ ಬಹುಸಾಂಸ್ಕೃತಿಕ ನಗರವಾಗಿದ್ದು, ವಿಭಿನ್ನ ಪ್ರದರ್ಶನಗಳು, ಅದ್ಭುತ ಡ್ರೋನ್ ಶೋಗಳ ಮೂಲಕ ಜಗತ್ತಿನ ಗಮನ ಸೆಳೆಯುವ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಇತ್ತೀಚೆಗೆ ದುಬೈಯಲ್ಲಿ ಬೃಹತ್ ಸಾಂತಾ ಕ್ಲಾಸ್ ಡ್ರೋನ್ ಶೋ ನಡೆದಿದೆ ಎಂದು ಹೇಳಿಕೊಂಡು ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣ ವೇದಿಕೆ ʼಎಕ್ಸ್ʼ ಮಾಲಕ ಎಲಾನ್ ಮಸ್ಕ್ ಕೂಡ ಈ ವೀಡಿಯೊವನ್ನು ಹಂಚಿಕೊಂಡಿದ್ದರು. ದುಬೈಯಲ್ಲಿ ನಿಜವಾಗಿಯೂ ಸಾಂತಾ ಕ್ಲಾಸ್ ಡ್ರೋನ್ ಶೋಗಳು ನಡೆದಿದೆಯಾ? ವೈರಲ್ ವೀಡಿಯೊ ವಾಸ್ತವಾಂಶವೇನು?
ವೈರಲ್ ವೀಡಿಯೊದಲ್ಲಿ ಏನಿದೆ?
ಬುರ್ಜ್ ಖಲೀಫಾ ಬಳಿ ಸಾವಿರಾರು ಡ್ರೋನ್‌ಗಳು ಸೇರಿ ದೊಡ್ಡದಾದ ಸಾಂತಾಕ್ಲಾಸ್ ಆಕೃತಿಯನ್ನು ರೂಪಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 3 ಸೆಕೆಂಡ್‌ಗಳ ಈ ವೀಡಿಯೊಗೆ “ದುಬೈ ಕ್ರಿಸ್ಮಸ್ ಅನ್ನು ಈ ರೀತಿ ಆಚರಿಸುತ್ತದೆ” ಎಂಬ ಶೀರ್ಷಿಕೆಯನ್ನು ಕೂಡ ನೀಡಲಾಗಿತ್ತು. ಸಾಂತಾಕ್ಲಾಸ್ ಕೈಗಳು ಮೇಲೆ, ಕೆಳಗೆ ಚಲನೆಯಲ್ಲಿರುವುದು, ಜನರು ಸಾಮಾನ್ಯವಾಗಿ ನಡೆದಾಡುವುದು ವೀಡಿಯೊದಲ್ಲಿ ಕಂಡು ಬಂದಿದೆ. ಮೊಬೈಲ್ ಪೋನ್ ನಲ್ಲಿ ವೀಡಿಯೊವನ್ನು ಚಿತ್ರೀಕರಿಸಿರುವುದು ಕಂಡು ಬಂದಿದೆ.
ವಾಸ್ತವವೇನು?
ಈ ವೀಡಿಯೊ ಅದ್ಭುತವಾಗಿ ಕಂಡು ಬಂದರೂ, ನಕಲಿಯಾಗಿದೆ. ಈ ವೀಡಿಯೊ ನಿಜವಲ್ಲ ಮತ್ತು 2023ರಲ್ಲಿ VFX ಬಳಸಿ ರಚಿಸಲಾಗಿದೆ. ಈ ವೀಡಿಯೊವನ್ನು ಯುಎಇ ಮೂಲದ VFX ಆರ್‌ಟಿಸ್ಟ್ ಫವೇಝ್ ಝಯಾತಿ ರಚಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಫವೇಝ್ ಝಯಾತಿ, “ಪ್ರಿಯ ಸ್ನೇಹಿತ ಎಲಾನ್ ಮಸ್ಕ್ ಅವರೇ, ಈ ವೀಡಿಯೊವನ್ನು ನಾನು 2 ವರ್ಷಗಳ ಹಿಂದೆ ರಚಿಸಿದ್ದೇನೆ, ಇದು ನಕಲಿ. ನಿಮಗೆ ಬೇಕಿದ್ದರೆ ಸಾಂತಾಕ್ಲಾಸ್ ಬದಲಿಗೆ ನಿಮ್ಮನ್ನು ಕೂಡ ಅದೇ ರೀತಿ ಮಾಡಬಲ್ಲೆ” ಎಂದು ತಮಾಷೆಯಾಗಿ ಬರೆದಿದ್ದಾರೆ.
ಈ ವೀಡಿಯೊ ಮೊದಲು 2023ರಲ್ಲಿ ಪೋಸ್ಟ್ ಆಗಿತ್ತು. ಫವೇಝ್ ಝಯಾತಿ ಪೇಜ್‌ನಲ್ಲಿ 18 ಮಿಲಿಯನ್ ವೀಕ್ಷಣೆಗಳನ್ನು ಪಡೆದಿತ್ತು.
ವೀಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು ಮತ್ತು ಈ ವೀಡಿಯೊವನ್ನು ಹೇಗೆ ರಚಿಸಿದ್ದೇನೆ ಎಂದು ಅವರು ಮತ್ತೊಂದು ವೀಡಿಯೊದಲ್ಲಿ ಹೇಳಿದ್ದಾರೆ. ವೀಡಿಯೊ ಅಡಿ ಬರಹದಲ್ಲಿ ಸ್ಪಷ್ಟವಾಗಿ ಇದು VFX ಬಳಸಿ ರಚಿಸಿದ್ದು ಎಂದು ಉಲ್ಲೇಖಿಸಿದ್ದರೂ, ಬಯೋದಲ್ಲಿ VFX ಕಲಾವಿದ ಎಂದು ಬರೆದಿದ್ದರೂ, ವೀಡಿಯೊಗೆ ಬಹಳಷ್ಟು ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ. ಇನ್ನಷ್ಟು ಗೊಂದಲ ತಪ್ಪಿಸಲು ಝಯಾತಿ ಅವರು ಈ VFX ವೀಡಿಯೊವನ್ನು ಡಿಲೀಟ್ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ ಯಾವುದೇ ವಿಚಾರವನ್ನು ʼಹಂಚಿಕೊಳ್ಳುವ ಮೊದಲು ಒಂದು ಕ್ಷಣ ಯೋಚಿಸಿʼ ಎಂದು ಬರೆದುಕೊಂಡಿದ್ದಾರೆ.
ಆದ್ದರಿಂದ ದುಬೈಯಲ್ಲಿ ಡ್ರೋನ್ ಶೋಗಳು ನಡೆಯುತ್ತವೆ, ಆದರೆ ಸಾಂತಾ ಕ್ಲಾಸ್ ಡ್ರೋನ್ ಶೋ ನಡೆದಿದೆ ಎನ್ನುವುದು ಸುಳ್ಳು ಎನ್ನುವುದು ಬಹಿರಂಗವಾಗಿದೆ.