×
Ad

112 ಕೋಟಿ ರೂ. ಲಂಚದ ಜಾಲದಲ್ಲಿ ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ನವನೀತ್ ಸೆಹಗಲ್ ಹೆಸರು!

Newslaundry ತನಿಖಾ ವರದಿ

Update: 2025-12-27 11:55 IST

ನವನೀತ್ ಸೆಹಗಲ್ (Photo credit: madhyamamonline.com)

ಹೊಸದಿಲ್ಲಿ: ಪಿಎಂಒ ಬಗೆಗಿನ ಸುದ್ದಿಗಳನ್ನು ಗಮನಿಸುತ್ತಿರುವವರಿಗೆ ನವನೀತ್ ಸೆಹಗಲ್ ಎಂಬ ಐಎಎಸ್ ಅಧಿಕಾರಿಯ ಹೆಸರು ಗೊತ್ತಿರುತ್ತದೆ. 1988 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಅವರು ಸೆಹಗಲ್ ಸುಮಾರು 34-35 ವರ್ಷಗಳ ಕಾಲ ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸಿದರು.

ನಿವೃತ್ತಿಯ ನಂತರ ಅವರು ಪ್ರಸಾರ ಭಾರತಿ ಅಧ್ಯಕ್ಷರಾದರು. ಆದರೆ ಡಿಸೆಂಬರ್ 3 ರಂದು ಅವರು ಇದ್ದಕ್ಕಿದ್ದಂತೆ ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣ ಗೊತ್ತಾಗಿರಲಿಲ್ಲವಾದರೂ, ರಾಜೀನಾಮೆ ಅಂಗೀಕಾರವಾಗಿತ್ತು. ನವನೀತ್ ಸೆಹೆಗಲ್ ಹೆಸರು ಆದಾಯ ತೆರಿಗೆ ಇಲಾಖೆಯ ಗೌಪ್ಯ ದಾಖಲೆಗಳಲ್ಲಿ ಪತ್ತೆಯಾಗಿದೆ ಎಂದು Newslaundry ವರದಿ ಹೇಳುತ್ತಿದೆ.

ಉತ್ತರ ಪ್ರದೇಶದಲ್ಲಿನ 2022 ರ ವ್ಯವಸ್ಥಿತ ಅಧಿಕಾರಶಾಹಿ ಭ್ರಷ್ಟಾಚಾರ ಕುರಿತ ಐಟಿ ಇಲಾಖೆಯ ರಹಸ್ಯ ದಾಖಲೆಯಲ್ಲಿ 112 ಕೋಟಿ ರೂ ಲಂಚದ ಜಾಲದಲ್ಲಿ ನವನೀತ್ ಸೆಹಗಲ್ ಹೆಸರು ಪ್ರಮುಖವಾಗಿದೆ ಎಂದು Newslaundry ವರದಿ ಮಾಡಿದೆ.

ಉತ್ತರ ಪ್ರದೇಶ ಸರ್ಕಾರದ ವಿವಿಧ ಯೋಜನೆಗಳಿಗೆ ಟೆಂಡರ್‌ಗಳಲ್ಲಿ ಲಂಚದ ಆರೋಪ ಸಂಬಂಧ ಐಟಿ ಇಲಾಖೆ ಸಿದ್ಧಪಡಿಸಿದ 254 ಪುಟಗಳ ಗೌಪ್ಯ ದಾಖಲೆಯನ್ನು ಆಧರಿಸಿದ ವರದಿಯ ಮೂಲಕ ನವನೀತ್ ಹೆಸರು ಬಯಲಿಗೆ ಬಂದಿದೆ.

ನಗದು ವರ್ಗಾವಣೆ, ದುಬಾರಿ ಉಡುಗೊರೆಗಳ ಬಗ್ಗೆ ವಾಟ್ಸಾಪ್ ಮೆಸೇಜ್ ಗಳು, ಶಂಕಿತ ಶೆಲ್ ಸಂಸ್ಥೆಯ ಮೂಲಕ ಆಸ್ತಿ ಹಾದಿ ಮತ್ತು ಮಾಜಿ ಉನ್ನತ ಅಧಿಕಾರಿ ನವನೀತ್ ಸೆಹಗಲ್ ಅವರ ಮಗ ನಡೆಸುತ್ತಿದ್ದ ಕಂಪನಿಯಲ್ಲಿ ಮಾಡಿದ 21 ಕೋಟಿ ರೂ ಗಳ ಹೂಡಿಕೆ ಬಗ್ಗೆ ತನಿಖಾಧಿಖಾರಿಗಳು ದಾಖಲಿಸಿರುವುದಾಗಿ ವರದಿಯಲ್ಲಿ ಹೆಳಲಾಗಿದೆ.

ಈ ವಿಷಯವನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಉಲ್ಲೇಖಿಸಲು ಅನುಮೋದನೆ ಪಡೆದ ಐಟಿ ಅಧಿಕಾರಿ ಕಡೆಗೆ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ವಿರುದ್ಧ ಆಪರೇಷನ್ ಪ್ಯಾಂಥರ್ ಅನ್ನು ಮುನ್ನಡೆಸಿದ್ದರು. ಆಪರೇಷನ್ ಪ್ಯಾಂಥರ್ ದೊಡ್ಡ ಸುದ್ದಿಯಾದರೂ, ಸೆಹಗಲ್ ವಿಚಾರ ಬಯಲಿಗೆ ಬರಲಿಲ್ಲ. ಸೆಹಗಲ್ ನಿವೃತ್ತಿ ನಂತರ ಮೋದಿ ಸರ್ಕಾರದಲ್ಲಿ ಪ್ರಸಾರ ಭಾರತಿ ಅಧ್ಯಕ್ಷರಾಗಿದ್ದರು.

ವರದಿ ಪ್ರಕಾರ, ಕಿಕ್‌ಬ್ಯಾಕ್‌ಗಳ ಅತಿದೊಡ್ಡ ಪಾಲು ನವನೀತ್ ಕುಮಾರ್ ಸೆಹಗಲ್ ಅವರಿಗೆ ಹೋಗಿದೆ. ತನಿಖೆಯ ಹೊತ್ತಲ್ಲಿ ಅವರು ಹಲವಾರು ಪ್ರಬಲ ಹುದ್ದೆಗಳಲ್ಲಿದ್ದರು. ಆದಾಯ ತೆರಿಗೆ ತನಿಖೆಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ, ಅವರು ದಿಲ್ಲಿಯಲ್ಲಿ ಪ್ರಸಾರ ಭಾರತಿ ಮುಖ್ಯಸ್ಥರಾದರು. ಇದ್ದಕ್ಕಿದ್ದಂತೆ ಅವರು ಆ ಹುದ್ದೆ ತ್ಯಜಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ಟೆಂಡರ್‌ಗಳು ಮತ್ತು ಅನುದಾನಗಳಲ್ಲಿನ ಕಿಕ್‌ಬ್ಯಾಕ್‌ಗಳ ಜಾಲ ಬಯಲಾಗಲು ಕಾರಣವಾದದ್ದು 2022 ರ ಮಾರ್ಚ್ ನಲ್ಲಿ ನಡೆದ ಒಂದು ಐಟಿ ರೈಡ್. ಲಕ್ನೋ ರಸ್ತೆಯಲ್ಲಿ ಟೊಯೋಟಾ ವಾಹನ ತಡೆದು, ಅದರೊಳಗಿದ್ದ ಮೂವರನ್ನು 41 ಲಕ್ಷ ರೂ ನಗದು ಸಹಿತ ಹಿಡಿದುಹಾಕಿದ ನಂತರ ಈ ಜಾಲ ಬಯಲಾಗಿತ್ತು.

ಸಾರ್ವಜನಿಕ ಹಣವನ್ನು ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಶೆಲ್ ಕಂಪೆನಿಗಳ ಜಾಲದ ಮೂಲಕ ಹೇಗೆ ವರ್ಗಾಯಿಸಲಾಗಿದೆ ಎಂಬುದರ ವಿವರ ಐಟಿ ದಾಖಲೆಗಳಲ್ಲಿದೆ. 2019-20 ರಿಂದ 2021-22 ರವರೆಗಿನ ಮೂರು ಹಣಕಾಸು ವರ್ಷಗಳಲ್ಲಿ ಸೆಹಗಲ್ ಕನಿಷ್ಠ 24 ಕೋಟಿ ರೂ.ಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಅವಧಿಯಲ್ಲಿ ಅವರು ಪ್ರಧಾನ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಎಂಎಸ್‌ಎಂಇ ಮತ್ತು ಖಾದಿ ಇಲಾಖೆಗಳನ್ನು ನಿರ್ವಹಿಸಿದ್ದರು. ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (ಐಇಡಿ) ಮತ್ತು ಯುಪಿ ಇಂಡಸ್ಟ್ರಿಯಲ್ ಕನ್ಸಲ್ಟೆಂಟ್ಸ್ ಲಿಮಿಟೆಡ್ (ಯುಪಿಕಾನ್) ಅಧ್ಯಕ್ಷ ಹುದ್ದೆಗಳಲ್ಲೂ ಇದ್ದರು.

24 ಕೋಟಿ ಜೊತೆಗೆ, ಅವರ ಕುಟುಂಬದ ಆಸ್ತಿ ವ್ಯವಹಾರಗಳು ಮತ್ತು ಹಣಕಾಸಿನ ಸಂಬಂಧಗಳು ಹಿತಾಸಕ್ತಿ ಸಂಘರ್ಷ ಮತ್ತು ಸಂಭಾವ್ಯ ಕ್ವಿಡ್ ಪ್ರೊ ಕೊ ಬಗ್ಗೆ ಹೇಳುತ್ತವೆ. 2018 ರಿಂದ 2020 ರ ಅವಧಿಯಲ್ಲಿ ಸೆಹಗಲ್ ಅವರ ಕುಟುಂಬ ಶಂಕಿತ ಶೆಲ್ ಸಂಸ್ಥೆಯಿಂದ 17.59 ಕೋಟಿ ರೂ.ಗಳನ್ನು ರಿಯಲ್ ಎಸ್ಟೇಟ್‌ ನಲ್ಲಿ ಹಾಕಿತು.

ಅಷ್ಟೊಂದು ಹೂಡಿಕೆ ಮಾಡುವ ಮಟ್ಟಿಗೆ ಅವರ ಕುಟುಂಬ ಆರ್ಥಿಕವಾಗಿ ಗಟ್ಟಿಯಾಗಿಲ್ಲ ಎಂಬುದು ತೆರಿಗೆ ತನಿಖಾಧಿಕಾರಿಗಳ ಅನುಮಾನವಾಗಿತ್ತು. ಸೆಹಗಲ್ ಅವರ ಮಗ ನಿರ್ದೇಶಕರಾಗಿದ್ದ ಕಂಪನಿಯಲ್ಲಿ ಮಾಡಿದ 21 ಕೋಟಿ ಹೂಡಿಕೆಯನ್ನು ಸಹ ವರದಿ ಪರಿಶೀಲಿಸಿದೆ. ನಷ್ಟದಲ್ಲಿರುವ ಒಂದು ಸಂಸ್ಥೆಯಿಂದ ಹಣ ಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆ ಹಣ, ಆಗಲೇ ನಷ್ಟದಲ್ಲಿದ್ದ ಮತ್ತು ಬ್ಯಾಂಕ್ ವಂಚನೆ ಆರೋಪಕ್ಕಾಗಿ ಸಿಬಿಐ ತನಿಖೆಗೆ ಒಳಪಟ್ಟಿದ್ದ ಇನ್ನೊಂದು ಕಂಪೆನಿಯಿಂದ ಸಾಲವಾಗಿ ಬಂದಂತೆ ತೋರಿಸಲಾಗಿತ್ತು. ಆದರೆ, ಆ ಕಂಪೆನಿಗೆ ಮಾಡಿದ ಯಾವುದೋ ಸಹಾಯಕ್ಕೆ ಲಂಚವಾಗಿ ಸೆಹಗಲ್ ಗೆ ಈ ಹಣ ಬಂದಿದೆ ಎಂದು ಶಂಕಿಸಲಾಗಿದೆ.

ಮುಖ್ಯವಾಗಿ, ಯುಪಿ ಐಇಡಿಯಿಂದ 65 ಕೋಟಿ ರೂ. ಮತ್ತು ಅರೆ ಸರ್ಕಾರಿ ಪಿಎಸ್‌ಯು ಯುಪಿಕಾನ್‌ನಿಂದ 46 ಕೋಟಿ ರೂ. ವಂಚಿಸಲಾಗಿದೆ ಎಂದು ತನಿಖಾಧಿಕಾರಿಗಳು ನಂಬಿದ್ದರು.ಒಟ್ಟು ಸುಮಾರು 112 ಕೋಟಿ ರೂ.ಗಳನ್ನು ಸೆಹಗಲ್ ಸೇರಿದಂತೆ ಅಧಿಕಾರಿಗಳ ಜಾಲದ ನಡುವೆ ಹಂಚಲಾಗಿತ್ತು ಎನ್ನಲಾಗಿದೆ.

ಐಇಡಿ ಒಳಗೆ, ತರಬೇತಿ ಕಾರ್ಯಕ್ರಮಗಳು ಅಥವಾ ಟೂಲ್‌ಕಿಟ್ ವಿತರಣೆಗಾಗಿ ಸರ್ಕಾರಿ ಹಣ ಬಿಡುಗಡೆ ಮಾಡಿದಾಗ, ಆ ಹಣದ ಒಂದು ನಿರ್ದಿಷ್ಟ ಭಾಗವನ್ನು ನಗದು ರೂಪದಲ್ಲಿ ಹಿಂದಕ್ಕೆ ತೆಗೆದುಕೊಂಡು ಅಧಿಕಾರಿಗಳಿಗೆ ವಿತರಿಸಲಾಯಿತು ಎಂದು ಆರೋಪಿಸಲಾಗಿದೆ.

ವಿಶ್ವಕರ್ಮ ಶ್ರಮ ಸಮ್ಮಾನ್ ಯೋಜನೆ ಮತ್ತು ಒಂದು ಜಿಲ್ಲೆ ಒಂದು ಉತ್ಪನ್ನದಂತಹ ಸ್ವಯಂ ಉದ್ಯೋಗ ಮತ್ತು ಕೌಶಲ್ಯ ಕಾರ್ಯಕ್ರಮಗಳಿಗೆ ಸಹಾಯ ಮಾಡಲು ಈ ಟೂಲ್‌ಕಿಟ್‌ಗಳ ವ್ಯವಸ್ಥೆಯಾಗಿತ್ತು. ಇವೆರಡೂ ಸಂಸ್ಥೆಗಳಲ್ಲದೆ, ಯುಪಿ ಸಣ್ಣ ಕೈಗಾರಿಕೆ ನಿಗಮಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲೂ ಇದೇ ಬಗೆಯ ವ್ಯವಹಾರ ಕಂಡಿರುವುದರ ಬಗ್ಗೆ ವರದಿ ಹೇಳುತ್ತದೆ.

ಈ ಐಟಿ ದಾಖಲೆಯಲ್ಲಿ 24 ವ್ಯಕ್ತಿಗಳ ಹೇಳಿಕೆಗಳಿವೆ. ಸೆಹಗಲ್ ಸೇರಿದಂತೆ ಕೆಲ ಅಧಿಕಾರಿಗಳ ಹೆಸರಿದ್ದರೂ, ಆ ಅಧಿಕಾರಿಗಳ ಒಂದೇ ಒಂದು ಹೇಳಿಕೆ ಅದರಲ್ಲಿಲ್ಲ. ಸೆಹಗಲ್ ಅಥವಾ ಇತರ ಅಧಿಕಾರಿಗಳಲ್ಲಿ ಯಾರನ್ನಾದರೂ ವಿಚಾರಣೆಗೆ ಕರೆಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳುತ್ತದೆ.

ಆದಾಯ ತೆರಿಗೆ ತನಿಖಾ ನಿರ್ದೇಶನಾಲಯ 2022 ರ ಡಿಸೆಂಬರ್ ನಲ್ಲಿ ಯುಪಿ ಸರ್ಕಾರದ ಸಂಬಂಧಿತ ಕಚೇರಿಗಳಿಗೆ ಸಲ್ಲಿಸಲು ಗೌಪ್ಯ ವರದಿಯನ್ನು ಅನುಮೋದಿಸಿತ್ತು. ಏಕೆಂದರೆ ಹಲವಾರು ವಿಷಯಗಳು ಕೇವಲ ತೆರಿಗೆಗೆ ಸಂಬಂಧಿಸಿದ್ದಾಗಿರದೆ, ತೆರಿಗೆ ಇಲಾಖೆಯ ವ್ಯಾಪ್ತಿಯಿಂದ ಹೊರಗಿದ್ದವು. ಆದರೆ ಕಡೆಗೆ ಅದು ಅಲ್ಲೇ ಸ್ಥಗಿತಗೊಂಡಿರುವ ಹಾಗಿದೆ. ರಾಜ್ಯ ಸರ್ಕಾರದ ಯಾವುದಾದರೂ ಕಚೇರಿಗಳಿಗೆ ಅದನ್ನು ಸಲ್ಲಿಸಲಾಯಿತೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.

ಅದೇ ವರದಿಯೊಂದಿಗೆ ಲೋಕಾಯುಕ್ತಕ್ಕೆ ಬರೆದ ಪತ್ರದ ಪ್ರತಿಯನ್ನು Newslaundry ಗಮನಿಸಿದೆ. ಆಪರೇಷನ್ ಪ್ಯಾಂಥರ್ ಸೇರಿದಂತೆ ಹಲವಾರು ಪ್ರಮುಖ ಪ್ರಕರಣಗಳ ತನಿಖೆಗೆ ಹೆಸರಾಗಿರುವ, ಪ್ರಸ್ತುತ ಕೊಚ್ಚಿಯಲ್ಲಿ ನಿಯೋಜಿತರಾಗಿರುವ ಐಆರ್‌ಎಸ್ ಅಧಿಕಾರಿ ಧ್ರುವ್ ಪುರಾರಿ ಸಿಂಗ್ ಆ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿ ಹೇಳಿದೆ.

2022 ರ ಮಾರ್ಚ್ ನಲ್ಲಿ ನಡೆದ ಐಟಿ ರೈಡ್ ವೇಳೆ ಟೊಯೊಟಾ ವಾಹನದಲ್ಲಿ ಸಿಕ್ಕಿಬಿದ್ದವರಲ್ಲಿ ಲಕ್ನೋದ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ದೇವೇಂದ್ರ ಪಾಲ್ ಸಿಂಗ್ ಕೂಡ ಇದ್ದರು. ನಗದು ಬಗ್ಗೆ ಪ್ರಶ್ನಿಸಿದಾಗ ಸಿಂಗ್ ನೀಡಿದ ಉತ್ತರ ಅನುಮಾನಾಸ್ಪದವಾಗಿತ್ತು.

ನಂತರ ಐಟಿ ಅಧಿಕಾರಿಗಳು ದಿಲ್ಲಿಯಲ್ಲಿನ ಸಿಂಗ್ ನಿವಾಸ ಶೋಧಿಸಿದಾಗ 4.35 ಕೋಟಿ ರೂ ನಗದು ಪತ್ತೆಯಾಗಿದ್ದರ ವರದಿಯಾಗಿತ್ತು. ಅವರ ಮೂಲಕವೇ, ಹೇಗೆ ಈ ಕಿಕ್ಬ್ಯಾಕ್ ಪಡೆಯುವ ದಂಧೆ ನಡೆಯುತ್ತದೆ ಎಂಬುದು ಬಯಲಾಗಿತ್ತು. ಸಿಂಗ್ ಹೇಳಿಕೆ ಪ್ರಕಾರ, ಕಿಕ್‌ಬ್ಯಾಕ್‌ ನಗದು ರೂಪದಲ್ಲೇ ಹೋಗುತ್ತಿದ್ದವು. ಪ್ರತಿ ತರಬೇತಿ ಕಾರ್ಯಕ್ರಮಕ್ಕೆ, ಬಿಡುಗಡೆಯಾದ ಸರ್ಕಾರಿ ನಿಧಿಯ ಸುಮಾರು 30 ಪ್ರತಿಶತವನ್ನು ಹಿಂದಕ್ಕೆ ತೆಗೆದುಕೊಂಡು ಹಿರಿಯ ಅಧಿಕಾರಿಗಳಿಗೆ ವಿತರಿಸುತ್ತಿದ್ದ ಕ್ರಮ ಬಯಲಿಗೆ ಬಂದಿತ್ತು.

ಈ ಮೊತ್ತದಲ್ಲಿ ಸುಮಾರು ಐದು ಪ್ರತಿಶತ ನವನೀತ್ ಸೆಹಗಲ್ ಅವರಿಗೆ, ನಾಲ್ಕು ಪ್ರತಿಶತ ಕೈಗಾರಿಕೆಗಳ ನಿರ್ದೇಶಕರಿಗೆ ಮತ್ತು ಮೂರು ಪ್ರತಿಶತ ಎಂಎಸ್‌ಎಂಇ ಇಲಾಖೆ ಅಧಿಕಾರಿಗಳಿಗೆ ಹೋಗುತ್ತಿತ್ತು ಎಂದು ಸಿಂಗ್ ಹೇಳಿದ್ದಾರೆ.

ಕಾನ್ಪುರ, ಲಕ್ನೋ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ವಿವಿಧ ಸ್ಥಳಗಳಲ್ಲಿ ಹಣ ಹಸ್ತಾಂತರಿಸಿದ ಬಗ್ಗೆಯೂ ಸಿಂಗ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಹಣ ಎಲ್ಲಿಗೆ ತಲುಪಿಸಬೇಕೆಂದು ಸೆಹಗಲ್ ಸೂಚಿಸುತ್ತಿದ್ದರು ಮತ್ತು ಪ್ರತಿ ಬಾರಿಯೂ ಅದನ್ನು ಪಡೆಯಲು ಬೇರೆ ಬೇರೆ ಜನರೇ ಬರುತ್ತಿದ್ದರು ಎಂದು ಸಿಂಗ್ ಹೇಳಿದ್ಧಾರೆ.

ಐಇಡಿಯಲ್ಲಿ ಸಿಂಗ್ ಅವರಿಬ್ಬರು ಸಹೋದ್ಯೋಗಿಗಳು ಸಹ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಹೇಳಿಕೆಗಳನ್ನು ದಾಖಲಿಸಿದ ನಂತರ ಐಟಿ 2022 ರ ಜೂನ್ ನಲ್ಲಿ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತು.

ಅವುಗಳಲ್ಲಿ ಯುಪಿಐಸಿಒಎನ್‌ನ ಆಗಿನ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ರಾಮಶಿಶ್ ಸಿಂಗ್, ಆಗಸ್ಟ್ 2021 ರವರೆಗೆ ವಿಎಸ್‌ಎಸ್‌ವೈಗಾಗಿ ಸ್ಕೀಮ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆಗಿನ ಕೈಗಾರಿಕಾ ಉಪ ನಿರ್ದೇಶಕ ರಾಜೇಶ್ ಸಿಂಗ್ ಯಾದವ್ ಮತ್ತು ಕಾನ್ಪುರ ಮೂಲದ ಗುತ್ತಿಗೆದಾರ ಅಚಿಂತ್ ಮಂಗ್ಲಾನಿ ಅವರ ನಿವಾಸಗಳು ಸೇರಿವೆ.

ಅವರಲ್ಲಿ ಮಂಗ್ಲಾನಿ, ಸೆಹಗಲ್ ಜೊತೆ ನೇರ ಸಂವಹನ ಇಟ್ಟುಕೊಂಡವರಾಗಿದ್ದರು. ಗುತ್ತಿಗೆ ಮಿತಿ ತಪ್ಪಿಸಲು ಕುಟುಂಬ ಸದಸ್ಯರ ಹೆಸರಿನಲ್ಲಿ ಆರು ಕಂಪೆನಿಗಳನ್ನು ಹೊಂದಿದ್ದರು ಎಂದು ವರದಿ ಹೇಳಿದೆ.

ಸೆಹಗಲ್ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಹಣ ನೀಡಿದ್ದಾಗಿ ಮಂಗ್ಲಾನಿ ದೃಢಪಡಿಸಿದ್ದಾರೆ. ಅವರು ಸೆಹಗಲ್‌ ಗಾಗಿ ಐಫೋನ್ ಮತ್ತು ಸೂಟ್‌ಗಳನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಐಇಡಿ ಮತ್ತು ಯುಪಿಕಾನ್ ಎರಡರ ಮೂಲಕವೂ ಸೆಹಗಲ್ 2019-20 ರಲ್ಲಿ 53 ಲಕ್ಷ, 2020-21 ರಲ್ಲಿ 3.85 ಕೋಟಿ ಮತ್ತು 2021-22 ರಲ್ಲಿ 19.9 ಕೋಟಿ ರೂ ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ತೆರಿಗೆ ಇಲಾಖೆ ಅಂದಾಜಿಸಿದೆ. ಸೆಹಗಲ್ ಅವರಿಗೆ ಹೆಚ್ಚಿನ ಪಾಲು, ಅಂದರೆ ಸುಮಾರು 24 ಕೋಟಿ ರೂ ಹೋಗಿದೆ.

ಸೆಹಗಲ್ ನಂತರದವರಲ್ಲಿ 15 ಕೊಟಿ ಪಡೆದ ಪ್ರವೀಣ್ ರಾಮಶಿಶ್ ಸಿಂಗ್, 14.9 ಕೋಟಿ ಪಡೆದ ದೇವೇಂದ್ರ ಪಾಲ್ ಸಿಂಗ್, 4.3 ಕೋಟಿ ಪಡೆದ ಮನೀಶ್ ಚೌಹಾಣ್ ಮತ್ತು ಸುಮಾರು 4.14 ಕೋಟಿ ಪಡೆದ ರಾಜೇಶ್ ಸಿಂಗ್ ಯಾದವ್ ಇದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ವರದಿಯ ಪ್ರಕಾರ, ಈ ವ್ಯವಹಾರದಲ್ಲಿ ಕೋಡ್ ವರ್ಡ್ ಬಳಸಲಾಗುತ್ತಿತ್ತು. ಅವುಗಳಲ್ಲಿ ಲಂಬು, ಬಾಸ್, ಮತ್ತು NS ಎಂಬ ಕೋಡ್ ವರ್ಡ್ಗಳು ಸೆಹಗಲ್ ಬಗ್ಗೆ ಇದ್ದವು ಎಂಬುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಮಂಗ್ಲಾನಿ ಫೋನ್‌ನಲ್ಲಿ ಸೆಹಗಲದ ಮೊಬೈಲ್ ಸಂಖ್ಯೆ NS ಎಂದೇ ಸೇವ್ ಆಗಿದ್ದರ ಬಗ್ಗೆಯೂ ತಿಳಿದುಕೊಳ್ಳಲಾಗಿದೆ.

ಕಾನ್ಪುರದಲ್ಲಿರುವ ಮಂಗ್ಲಾನಿ ನಿವಾಸದಲ್ಲಿ ರೈಡ್ ನಡೆದಾಗ ವಶಪಡಿಸಿಕೊಳ್ಳಲಾದ ಡಿಜಿಟಲ್ ಸಾಧನಗಳಲ್ಲಿ ಸೆಹಗಲ್ ಮತ್ತಿತರ ಅಧಿಕಾರಿಗಳ ಜೊತೆಗಿನ ಫೋಟೊಗಳು, ಸೆಹಗಲ್ ಅವರ ಅಧಿಕೃತ ಭೇಟಿಗಳನ್ನು ತೋರಿಸುವ ಯುಪಿ ಸಚಿವಾಲಯದ ಗೇಟ್ ಪಾಸ್‌ಗಳು ಮತ್ತು ನಗದು ಪಾವತಿ ಬಗ್ಗೆ, ಉಡುಗೊರೆಗಳ ಬಗ್ಗೆ ಚರ್ಚಿಸುವ ವಾಟ್ಸಾಪ್ ಸಂಭಾಷಣೆಗಳು ಇರುವುದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ಐಫೋನ್ 13 ಮಾದರಿಗಳ ಚಿತ್ರಗಳೊಂದಿಗೆ ಸೆಎಹಗಲ್ ಅವರಿಗೆ ಮೆಸೇಜ್ ಕಳಿಸುವ ಮಂಗ್ಲಾನಿ, ಬಣ್ಣವನ್ನು ಆರಿಸಲು ಕೇಳಿರುವುದು, ಅದಕ್ಕೆ ಸೆಹಗಲ್ ಬಿಳಿ ಬಣ್ಣ ಎಂದಿರುವುದು ಚಾಟ್ ನಲ್ಲಿದೆ. ಸೂಟ್‌ಗಳನ್ನು ಎಲ್ಲಿಂದ ಆಯ್ಕೆ ಮಾಡಲಾಗುತ್ತಿದೆ ಎಂಬುದರ ಬಗೆಗಿನ ಮೆಸೇಜ್ ಕೂಡ ಸಿಕ್ಕಿದೆ.

ಕಿಕ್ಬ್ಯಾಕ್ ಮೂಲಕ ಬಂದ ಹಣವನ್ನು ಸೆಹಗಲ್ ಕುಟುಂಬ ಆಸ್ತಿ ವಹಿವಾಟುಗಳಿಗೆ ಬಳಸಿರಬಹುದು ಎಂದು ಶಂಕಿಸಲಾಗಿದೆ. 2018 ರಿಂದ 2020 ರ ಅವಧಿಯಲ್ಲಿ ಪತ್ನಿ ಮತ್ತು ಪುತ್ರರಾದ ಶಿವ ಮತ್ತು ಧ್ರುವ್ ಸೇರಿದಂತೆ ಸೆಹಗಲ್ ಕುಟುಂಬ ದಿಲ್ಲಿಯ ಆನಂದ್ ನಿಕೇತನ ಮತ್ತು ಶಕರ್ಪುರದಲ್ಲಿ SPD ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಎಂಬ ಒಂದೇ ಕಂಪನಿಯಿಂದ ರೂ. 17.59 ಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸೆಹಗಲ್ ಅಧ್ಯಕ್ಷತೆ ವಹಿಸಿದ್ದ UPICON ಸಂಸ್ಥೆ ಈ ಅವಧಿಯಲ್ಲಿ SPD ಇನ್ಫ್ರಾಕಾನ್‌ ಗೆ ಬಾಡಿಗೆ ಪಾವತಿಸುತ್ತಿತ್ತು., ಇದು ಸಂಭಾವ್ಯ ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಯಿತು. ಅಲ್ಲದೆ, ತೆರಿಗೆ ಇಲಾಖೆ ಪ್ರಕಾರ, SPD ಇನ್ಫ್ರಾಕಾನ್ ಸೆಹಗಲ್ ಅವರ ಕುಟುಂಬದಿಂದ ಪರೋಕ್ಷವಾಗಿ ನಿಯಂತ್ರಿಸಲ್ಪಡುವ ಶಂಕಿತ ಶೆಲ್ ಕಂಪೆನಿಯಾಗಿರಬಹುದು.

ಕಂಪೆನಿಯ ಬ್ಯಾಂಕ್ ಹೇಳಿಕೆಗಳು ಸೆಹಗಲ್ ಕುಟುಂಬದೊಂದಿಗೆ ಹಣಕಾಸಿನ ವಹಿವಾಟು ತೋರಿಸಿವೆ. ತನಿಖಾಧಿಕಾರಿಗಳು SPD ಇನ್ಫ್ರಾಕಾನ್‌ನ ನಿರ್ದೇಶಕರಾದ ರಾಮ್ ಮೋಹನ್ ದೀಕ್ಷಿತ್ ಅವರನ್ನು ಕರೆಸಿದಾಗ, ಅವರು ಸೆಹಗಲ್‌ ಗೆ ತೀರಾ ಬೇಕಾದವರು ಎಂಬುದು ತಿಳಿದಿದೆ.

ಇದಲ್ಲದೆ, ಎಸ್‌ಪಿಡಿ ಇನ್ಫ್ರಾಕಾನ್ ನ ಪ್ರಸ್ತುತ ನೋಂದಾಯಿತ ವಿಳಾಸ 2019-20 ರಲ್ಲಿ ಶಕರ್‌ಪುರದಲ್ಲಿ ಸೆಹಗಲ್ ಅವರ ಪತ್ನಿಗೆ 4.53 ಕೋಟಿ ರೂ.ಗೆ ಮಾರಾಟವಾದ ಫ್ಲಾಟ್‌ನದ್ದೇ ಆಗಿದೆ.

ಕೃಪೆ: newslaundry.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News