×
Ad

ಪಾಕ್ ಗೂಢಚಾರಣಿಯತ್ತ ಆಕರ್ಷಿತರಾಗಿದ್ದ ಡಿಆರ್‌ಡಿಒ ವಿಜ್ಞಾನಿ ಭಾರತದ ಕ್ಷಿಪಣಿ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದ್ದರು: ಎಟಿಎಸ್‌ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

Update: 2023-07-08 12:05 IST

ಪುಣೆ: ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಮೇ 3ರಂದು ಅಧಿಕೃತ ಗೌಪ್ಯತೆ ಕಾಯಿದೆಯಡಿಯಲ್ಲಿ ಬಂಧಿಸಲ್ಪಟ್ಟಿದ್ದ ಡಿಆರ್‌ಡಿಒದ ಪುಣೆಯಲ್ಲಿರುವ ಪ್ರಯೋಗಾಲಯಗಳಲ್ಲೊಂದರ ನಿರ್ದೇಶಕರಾಗಿದ್ದ ಪ್ರದೀಪ್‌ ಕುರುಲ್ಕರ್‌ ವಿರುದ್ಧ ಮಹಾರಾಷ್ಟ್ರ ಪೊಲೀಸರ ಉಗ್ರ ನಿಗ್ರಹ ಪಡೆ ಚಾರ್ಚ್‌ಶೀಟ್‌ ಸಲ್ಲಿಸಿದೆ.

ಪ್ರದೀಪ್‌ ಅವರು ಪಾಕಿಸ್ತಾನಿ ಸ್ಪೈ ಏಜೆಂಟ್‌ “ಝಾರಾ ದಾಸಗುಪ್ತಾ” ಎಂಬ ಹೆಸರಿನೊಂದಿಗೆ ಪರಿಚಯಿಸಿಕೊಂಡಿದ್ದಾಕೆಯೊಂದಿಗೆ ಭಾರತೀಯ ಕ್ಷಿಪಣಿ ವ್ಯವಸ್ಥೆಗಳು ಮತ್ತು ಇತರ ಗೌಪ್ಯ ರಕ್ಷಣಾ ಯೋಜನೆಗಳ ಕುರಿತು ಚಾಟ್‌ ಮಾಡಿದ್ದರು ಎಂದು ಚಾರ್ಚ್‌ಶೀಟ್‌ನಲ್ಲಿ ಹೇಳಲಾಗಿದೆ.

ಇಬ್ಬರೂ ವಾಟ್ಸ್ಯಾಪ್‌ ಮತ್ತು ಆಡಿಯೋ, ವೀಡಿಯೋ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು, “ದಾಸಗುಪ್ತಾ” ತನ್ನನ್ನು ಇಂಗ್ಲೆಂಡ್‌ನಲ್ಲಿರುವ ಸಾಫ್ಟ್‌ ವೇರ್‌ ಇಂಜಿನಿಯರ್‌ ಎಂದು ಪರಿಚಯಿಸಿಕೊಂಡಿದ್ದಳು ಹಾಗೂ ಅಶ್ಲೀಲ ಸಂದೇಶ ಮತ್ತು ವೀಡಿಯೋಗಳನ್ನು ಕಳುಹಿಸಿ ಡಿಆರ್‌ಡಿಒ ವಿಜ್ಞಾನಿಯ ಸ್ನೇಹ ಸಂಪಾದಿಸಿದ್ದಳು,” ಎಂದು ಚಾರ್ಜ್‌ ಶೀಟ್‌ ಹೇಳಿದೆ.

ತನಿಖೆಯ ವೇಳೆ ಆಕೆಯ ವಿಳಾಸ ಪಾಕಿಸ್ತಾನದಲ್ಲಿದೆ ಎಂದು ಪೊಲೀಸರು ಕಂಡುಕೊಂಡಿದ್ದರು.

ಬ್ರಹ್ಮೋಸ್‌ ಲಾಂಚರ್‌, ಡ್ರೋನ್‌, ಯುಸಿವಿ, ಅಗ್ನಿ ಕ್ಷಿಪಣಿ ಲಾಂಚರ್‌, ಮಿಲಿಟರಿ ಬ್ರಿಡ್ಜಿಂಗ್‌ ಸಿಸ್ಟಂ ಮುಂತಾದವುಗಳ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ಈ ಪಾಕಿಸ್ತಾನಿ ಸ್ಪೈ ಏಜೆಂಟ್‌ ಪಡೆಯಲು ಯತ್ನಿಸಿದ್ದಳು ಎಂದು ಚಾರ್ಜ್‌ಶೀಟ್‌ ತಿಳಿಸಿದೆ.

“ಆಕೆಯತ್ತ ಆಕರ್ಷಿತರಾದ ಕುರುಲ್ಕರ್‌ ಡಿಆರ್‌ಡಿಒ ದ ಗೌಪ್ಯ ಮತ್ತು ಸೂಕ್ಷ್ಮ ಮಾಹಿತಿಯನ್ನು ತಮ್ಮ ಖಾಸಗಿ ಫೋನ್‌ನಲ್ಲಿ ಸಂಗ್ರಹಿಸಿ ನಂತರ ಅದನ್ನು ಆಕೆಗೆ ನೀಡಿದ್ದರು,” ಎಂದು ಚಾರ್ಜ್‌ ಶೀಟ್‌ ತಿಳಿಸಿದೆ.

ಜೂನ್‌ 2022ರಿಂದ ಡಿಸೆಂಬರ್‌ 2022ರ ತನಕ ಇಬ್ಬರೂ ಸಂಪರ್ಕದಲ್ಲಿದ್ದರು. ಆಗಷ್ಟೇ ಕುರುಲ್ಕರ್‌ ಶಂಕಾಸ್ಪದ ಚಟುವಟಿಕೆಯ ಸುಳಿವು ಪಡೆದಿದ್ದ ಡಿಆರ್‌ಡಿಒ ತನಿಖೆ ಆರಂಭಿಸಿತ್ತು. ಕುರುಲ್ಕರ್‌ ಝಾರಾಳ ಸಂಖ್ಯೆಯನ್ನು ಫೆಬ್ರವರಿ 2023ರಲ್ಲಿ ಬ್ಲಾಕ್‌ ಮಾಡಿದ್ದರೂ ನಂತರ ಬೇರೊಂದು ಭಾರತೀಯ ಸಂಖ್ಯೆಯಿಂದ ಅವರಿಗೆ ವಾಟ್ಸ್ಯಾಪ್‌ ಸಂದೇಶ ಬಂದು “ನನ್ನ ನಂಬರ್‌ ಏಕೆ ಬ್ಲಾಕ್‌ ಮಾಡಿದ್ದಿರಿ?” ಎಂದು ಪ್ರಶ್ನಿಸಿತ್ತು.

ತಮ್ಮ ವೈಯಕ್ತಿಕ ಮತ್ತು ಅಧಿಕೃತ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಆಕೆಯೊಂದಿಗೆ ನಿಯಮಕ್ಕೆ ವಿರುದ್ಧವಾಗಿ ಕುರುಲ್ಕರ್‌ ಹಂಚಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News