×
Ad

ನಿಮಗೆ 5 ವರ್ಷಗಳ ಅವಕಾಶ ನೀಡಿದ್ದರೂ ನೀವೇಕೆ ಸಿದ್ಧರಾಗಿರಲಿಲ್ಲ?: ಅವಿಶ್ವಾಸ ನಿರ್ಣಯ ಮಂಡಿಸಿರುವ ವಿಪಕ್ಷಗಳ ಕಾಲೆಳೆದ ಪ್ರಧಾನಿ ಮೋದಿ

Update: 2023-08-10 18:41 IST

ಹೊಸದಿಲ್ಲಿ: ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯ ಕುರಿತು ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಭಾಗವಹಿಸಿ ಮಾತನಾಡಿದರು. ಮಣಿಪುರ ಜನಾಂಗೀಯ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂಬ ವಿರೋಧ ಪಕ್ಷಗಳ ಆಗ್ರಹದ ಹಿನ್ನೆಲೆಯಲ್ಲಿ ಮೋದಿ ಭಾಷಣ ಮಾಡಿದರು ಎಂದು ndtv.com ವರದಿ ಮಾಡಿದೆ.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನು ಎಲ್ಲ ಸಂಸದ ಅಭಿಪ್ರಾಯಗಳನ್ನು ಆಲಿಸಿದ್ದೇನೆ. ಭಾರತವು ನಮ್ಮಲ್ಲಿ ಪದೇ ಪದೇ ವಿಶ್ವಾಸ ವ್ಯಕ್ತಪಡಿಸಿದೆ. ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿರುವುದನ್ನು ದೇವರ ವರವೆಂದೇ ನಾನು ಭಾವಿಸುತ್ತೇನೆ. ಇದು 2018ರಲ್ಲೂ ಆಗಿತ್ತು. ಆಗಲೂ ನಾನು ಹೇಳಿದ್ದೆ: ಅವಿಶ್ವಾಸ ನಿರ್ಣಯವು ನಮ್ಮ ಸಂಖ್ಯಾಬಲದ ಪರೀಕ್ಷೆಯಲ್ಲ; ಬದಲಿಗೆ ವಿರೋಧ ಪಕ್ಷಗಳ ಸಂಖ್ಯಾಬಲದ ಪರೀಕ್ಷೆ ಎಂದು” ಎಂದು ವ್ಯಂಗ್ಯವಾಡಿದ್ದಾರೆ.

ಅವಿಶ‍್ವಾಸ ನಿರ್ಣಯದ ಮೇಲೆ ಮತದಾನ ನಡೆದಾಗ ಅವರಿಗೆ ಕೊರತೆಯಾಗಿತ್ತು. ನಾವು ಸಾರ್ವಜನಿಕರ ಬಳಿ ಹೋದಾಗ ಜನರು ಅವರ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿದ್ದರು. ಎನ್‍ಡಿಎ ಹಾಗೂ ಬಿಜೆಪಿ ಅವರಿಗಿಂತ ಹೆಚ್ಚು ಮತ ಪಡೆದಿದ್ದವು. ಈ ಅರ್ಥದಲ್ಲಿ ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ನಮಗೆ ಅದೃಷ್ಟವೇ ಆಗಿದೆ. ಎನ್‍ಡಿಎ ಹಾಗೂ ಬಿಜೆಪಿಯು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದನ್ನು ನೀವು ನಿರ್ಧರಿಸಿದ್ದೀರಿ ಎಂದು ಅವರು ಕಾಲೆಳೆದರು.

ಕ್ಷೇತ್ರ ರಕ್ಷಣೆಯನ್ನು ವಿರೋಧ ಪಕ್ಷಗಳು ನಿಯೋಜಿಸಿವೆ. ಆದರೆ, ಬೌಂಡರಿ ಹಾಗೂ ಸಿಕ್ಸರ್ ಗಳನ್ನು ನಾವು ಇಲ್ಲಿಂದ ಹೊಡೆಯುತ್ತೇವೆ. ನಾವು ಸೆಂಚುರಿ ಹೊಡೆಯುತ್ತಲೇ ಇದ್ದರೆ, ಅವರು ನೋಬಾಲ್ ಮಾಡುತ್ತಲೇ ಹೋಗುತ್ತಿದ್ದಾರೆ. ನಾನು ನಿಮಗೆ ಅಧಿಕಾರಕ್ಕೆ ಮರಳಿ ಬರಲು ಐದು ವರ್ಷಗಳ ಕಾಲಾವಕಾಶ ನೀಡಿದ್ದೆ. ನೀವೇಕೆ ಸಿದ್ಧರಾಗಿರಲಿಲ್ಲ? ಎಂದು ಪ್ರಧಾನಿ ಮೋದಿ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News