ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಯ ಸುಳ್ಳುಸುದ್ದಿ ಪ್ರಕಟಣೆ: ಕ್ಷಮೆ ಯಾಚಿಸಿದ ‘ದೈನಿಕ್ ಭಾಸ್ಕರ್’
ಹೊಸದಿಲ್ಲಿ: ಭಾರತದ ಅತಿ ದೊಡ್ಡ ಹಿಂದಿ ದಿನಪತ್ರಿಕೆಯಾಗಿರುವ ದೈನಿಕ ಭಾಸ್ಕರ್ ತಮಿಳುನಾಡಿನಲ್ಲಿ ಬಿಹಾರಿ ವಲಸೆ ಕಾರ್ಮಿಕರ ಮೇಲೆ ದಾಳಿಯ ಸುಳ್ಳುಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ತನ್ನ ಮಂಗಳವಾರದ ಸಂಚಿಕೆಯ ಮುಖಪುಟದಲ್ಲಿ ಕ್ಷಮೆಯನ್ನು ಯಾಚಿಸಿದೆ ಎಂದು thenewsminute.com ವರದಿ ಮಾಡಿದೆ.
‘ದೈನಿಕ್ ಭಾಸ್ಕರ್’ 2023 ಮಾರ್ಚ್ ನಲ್ಲಿ ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ದಾಳಿಗಳು ನಡೆದಿವೆ ಎಂಬ ಆಘಾತಕಾರಿ ಸುಳ್ಳುಸುದ್ದಿಯನ್ನು ಪ್ರಕಟಿಸಿದ್ದು, ಬಿಜಿಪಿ ಬೆಂಬಲಿಗರು ಈ ವರದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿದ್ದರು. ಸುಳ್ಳುಸುದ್ದಿ ಪ್ರಕಟಣೆಗಾಗಿ ಕ್ಷಮೆ ಯಾಚಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಕಳೆದ ವಾರ ಪತ್ರಿಕೆಗೆ ತಾಕೀತು ಮಾಡಿತ್ತು.
‘ದೈನಿಕ್ ಭಾಸ್ಕರ್’ ತಮಿಳುನಾಡಿನಲ್ಲಿಯ ಬಿಹಾರಿ ವ್ಯಕ್ತಿಗೆ ಮಾಡಿದ್ದ ದೂರವಾಣಿ ಕರೆಯನ್ನು ಆಧರಿಸಿ ’ತಮಿಳುನಾಡಿನಲ್ಲಿಯ ತಾಲಿಬಾನಿಗಳು ಹಿಂದಿಯಲ್ಲಿ ಮಾತನಾಡುತ್ತಿರುವುದಕ್ಕಾಗಿ ಬಿಹಾರಿ ಕಾರ್ಮಿಕರನ್ನು ಶಿಕ್ಷಿಸುತ್ತಿದ್ದಾರೆ ’ ಎಂಬ ಸುದ್ದಿಯನ್ನು ಮಾ.2ರಂದು ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪ್ರಕಟಿಸಿತ್ತು. ‘ತಮಿಳುನಾಡಿನಲ್ಲಿ 15ಕ್ಕೂ ಅಧಿಕ ಬಿಹಾರಿ ವಲಸೆ ಕಾರ್ಮಿಕರನ್ನು ಕೊಲೆ ಮಾಡಲಾಗಿದೆ ’ ಎಂದೂ ಅದು ಹೇಳಿತ್ತು.
ಸುದ್ದಿಯು ದೇಶಾದ್ಯಂತ ಆಕ್ರೋಶದ ಅಲೆಗಳನ್ನು ಸೃಷ್ಟಿಸಿತ್ತು. ಮಾ.4ರಂದು ತಮಿಳುನಾಡು ಪೋಲಿಸರು ಸುಳ್ಳು ಮಾಹಿತಿಯನ್ನು ಹರಡಿದ ಆರೋಪದಲ್ಲಿ ದೈನಿಕ್ ಭಾಸ್ಕರ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ದಾಳಿ ಕುರಿತು 02.03.2023ರಂದು ಪ್ರಕಟಿಸಿದ್ದ ಸುದ್ದಿಯು ನಿಜವಾಗಿರಲಿಲ್ಲ ಎಂದು ಒಪ್ಪಿಕೊಂಡಿರುವ ಪತ್ರಿಕೆಯು, ವರದಿಯು ಸತ್ಯವಲ್ಲ ಎಂದು ಅದೇ ದಿನ ತಮಿಳುನಾಡು ಡಿಜಿಪಿಯವರು ವಾಟ್ಸ್ಆ್ಯಪ್ ಸಂದೇಶವನ್ನು ಕಳುಹಿಸಿದ ಬಳಿಕ ಟ್ವಿಟರ್ ಸೇರಿದಂತೆ ಎಲ್ಲ ಡಿಜಿಟಲ್ ಮಾಧ್ಯಮ ವೇದಿಕೆಗಳಿಂದ ಸುದ್ದಿಯನ್ನು ಅಂದೇ ತೆಗೆದುಹಾಕಲಾಗಿತ್ತು ಮತ್ತು ನಂತರದ ಲೇಖನಗಳಲ್ಲಿ ಡಿಜಿಪಿಯವರ ಹೇಳಿಕೆಯನ್ನು ಪ್ರಕಟಿಸಲಾಗಿತ್ತು ಎಂದು ತನ್ನ ಕ್ಷಮೆಯಾಚನೆಯಲ್ಲಿ ತಿಳಿಸಿದೆ.
ಸದ್ರಿ ಸುದ್ದಿಯನ್ನು ವರದಿ ಮಾಡಿದ್ದಕ್ಕಾಗಿ ದೈನಿಕ್ ಭಾಸ್ಕರ್ ನ ಸಂಪಾದಕೀಯ ಬಳಗವು ತಮಿಳುನಾಡು ಮತ್ತು ಬಿಹಾರದ ಜನರ ಕ್ಷಮೆಯನ್ನು ಯಾಚಿಸಿದೆ.