ನ್ಯಾಯಯುತ ಪರಿಹಾರಕ್ಕಾಗಿ 37 ವರ್ಷಗಳಿಂದ ಹೋರಾಡುತ್ತಿರುವ 1988ರ ಅಹ್ಮದಾಬಾದ್ ವಿಮಾನ ದುರಂತದ ಸಂತ್ರಸ್ತ ಕುಟುಂಬಗಳು!
PC: x.com/the_hindu
ಅಹ್ಮದಾಬಾದ್: ಭಾರತದ ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ಭೀಕರ ಎನಿಸಿದ ಎಐ 171 ವಿಮಾನ ದುರಂತ ರಾಷ್ಟ್ರದ ಗಮನ ಸೆಳೆದಿರುವ ಮಧ್ಯೆಯೇ 1988ರಲ್ಲಿ ನಡೆದ ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದವರ ಕುಟುಂಬಗಳು ನ್ಯಾಯಸಮ್ಮತ ಪರಿಹಾರಕ್ಕಾಗಿ 37 ವರ್ಷಗಳಿಂದಲೂ ಕಾನೂನು ಹೋರಾಟ ಮುಂದುವರಿಸಿಕೊಂಡು ಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈನಿಂದ ಅಹ್ಮದಾಬಾದ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 1988ರ ಅಕ್ಟೋಬರ್ 19ರಂದು ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 135 ಮಂದಿಯ ಪೈಕಿ 133 ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿತ್ತು.
ಆದರೆ ಘಟನೆ ನಡೆದು 37 ವರ್ಷ ಕಳೆದರೂ, ತಮಗೆ ಘೋಷಿಸಿರುವ ಪರಿಹಾರ ಅಸಮರ್ಪಕ ಎಂಬ ಕಾರಣದಿಂದ 20 ಸಂತ್ರಸ್ತ ಕುಟುಂಬಗಳು ನ್ಯಾಯಸಮ್ಮತ ಪರಿಹಾರಕ್ಕಾಗಿ ಸುಧೀರ್ಘ ಕಾನೂನು ಹೋರಾಟವನ್ನು ನಡೆಸುತ್ತಾ ಬಂದಿವೆ.
"ನಾವು ಸುಮಾರು 20 ಕುಟುಂಬಗಳು ನ್ಯಾಯಸಮ್ಮತ ಪರಿಹಾರಕ್ಕಾಗಿ ಸುಧೀರ್ಘ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದೇವೆ. ದುರಂತದ ಬಳಿಕ ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಆದರೆ ಪರಿಹಾರ ಮೃತ ವ್ಯಕ್ತಿಯ ಆದಾಯ ಮತ್ತು ವಯಸ್ಸಿಗೆ ಅನುಗುಣವಾಗಿರಬೇಕು ಎನ್ನುವುದು ನಮ್ಮ ಭಾವನೆ. ಆದ್ದರಿಂದ ಹೈಕೋರ್ಟ್ ತೀರ್ಪಿನ ಬಳಿಕ 2010ರ ಏಪ್ರಿಲ್ ನಲ್ಲಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ" ಎಂದು ಸಂತ್ರಸ್ತ ಕುಟುಂಬಗಳ ಸಂಘದ ಕಾರ್ಯದರ್ಶಿ ಪಂಕೇಶ್ ಪಟೇಲ್ ಹೇಳಿದರು.
ಸಂತ್ರಸ್ತ ಕುಟುಂಬಗಳಿಗೆ ಶೇಕಡ 6ರ ಬಡ್ಡಿಸಹಿತ ಪರಿಹಾರ ನೀಡುವಂತೆ ಸೆಷನ್ಸ್ ನ್ಯಾಯಾಲಯ 2003ರಲ್ಲಿ ಇಂಡಿಯನ್ ಏರ್‌ಲೈನ್ಸ್ ಮತ್ತು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು. ಹೈಕೋರ್ಟ್ 2009ರಲ್ಲಿ ಇದನ್ನು ಶೇಕಡ 9ಕ್ಕೆ ಹೆಚ್ಚಿಸಿತು. ಆದರೆ ದುಡಿಯುವ ಸಾಮರ್ಥ್ಯ ಮತ್ತು ವಯಸ್ಸಿನ ಮಾನದಂಡ ಇಟ್ಟುಕೊಂಡು ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಈ ಕುಟುಂಬಗಳು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿವೆ.
ಇದೀಗ 74 ವರ್ಷದವರಾಗಿರುವ ಉಷಾಬೆನ್ ಪಟೇಲ್ ಅವರ ಪತಿ ಶರದ್ ಪಟೇಲ್ ದುರಂತದಲ್ಲಿ ಮಡಿಯುವ ವೇಳೆಗೆ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಜರ್ಮನಿ ಕಂಪನಿಯೊಂದರ ಕಂಪನಿ ಕಾರ್ಯದರ್ಶಿಯಾಗಿದ್ದರು. ಅಂತೆಯೇ ಐಐಎಂ ಪದವೀಧರರಾಗಿದ್ದ ಸುನೀಲ್ ಶಾ ಅವರನ್ನು ದುರಂತದಲ್ಲಿ ಕಳೆದುಕೊಂಡಿದ್ದ ರೀಟಾಬೆನ್ ಶಾ (74) "2 ಲಕ್ಷ ಪರಿಹಾರವನ್ನು ನಾವು ಸ್ವೀಕರಿಸಿಲ್ಲ. ಅಂತಿಮವಾಗಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವೆ" ಎಂದು ಹೇಳುತ್ತಾರೆ.
"ವಯಸ್ಸು ಮತ್ತು ಆದಾಯದ ಆಧಾರದಲ್ಲಿ ಪರಿಹಾರಕ್ಕಾಗಿ ನಾವು ಆಗ್ರಹಿಸಿದ್ದೇವೆ. ಆಗ ತಂದೆಯ ಆದಾಯ ವರ್ಷಕ್ಕೆ 1.25 ಲಕ್ಷ ಆಗಿತ್ತು. 37 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ" ಎಂದು ತಂದೆ ರಂಜಿತ್ ಬಾಯ್ ಪಟೇಲ್ ಅವರನ್ನು ದುರಂತದಲ್ಲಿ ಕಳೆದುಕೊಂಡಿದ್ದ ಕೇತನ್ ಪಟೇಲ್ (63) ಸ್ಪಷ್ಟಪಡಿಸುತ್ತಾರೆ.