ಕಾನ್ಪುರದ ಕಟ್ಟಡದಲ್ಲಿ ಬೆಂಕಿ ಅವಘಡ: ಒಂದೇ ಕುಟುಂಬದ ಐವರು ಮೃತ್ಯು
PC | ANI
ಕಾನ್ಪುರ(ಉ.ಪ್ರ): ಇಲ್ಲಿಯ ಚಮನಗಂಜ್ ಪ್ರದೇಶದಲ್ಲಿಯ ಐದಂತಸ್ತಿನ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ರವಿವಾರ ತಡರಾತ್ರಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ.
ಗಾಂಧಿನಗರ ಬಡಾವಣೆಯಲ್ಲಿನ ಕಟ್ಟಡದ ತಳಅಂತಸ್ತಿನಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿಯು ಕಾಣಿಸಿಕೊಂಡಿದ್ದು, ಶೀಘ್ರವೇ ಇಡೀ ಕಟ್ಟಡವನ್ನು ವ್ಯಾಪಿಸಿಕೊಂಡಿತ್ತು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಂಕಿಯ ಜ್ವಾಲೆಗಳು ಕೇವಲ 15 ನಿಮಿಷಗಳಲ್ಲಿ ಐದನೇ ಅಂತಸ್ತನ್ನು ತಲುಪಿದ್ದವು.
ಸಾವುಗಳನ್ನು ದೃಢಪಡಿಸಿದ ಹೆಚ್ಚುವರಿ ಡಿಸಿಪಿ ರಾಜೇಶ ಶ್ರೀವಾಸ್ತವ ಅವರು,ಸುಮಾರು ಏಳು ಗಂಟೆಗಳ ಕಾಲ ನಡೆದ ಅಗ್ನಿಶಾಮಕ ಕಾರ್ಯಾರಣೆಯಲ್ಲಿ 20ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.
ದಟ್ಟಹೊಗೆ ಮತ್ತು ಬೆಂಕಿಯ ತೀವ್ರತೆಯಿಂದಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪದೇ ಪದೇ ಪ್ರಯತ್ನಿಸಿದ್ದರೂ ನತದೃಷ್ಟ ಕುಟುಂಬವು ವಾಸವಾಗಿದ್ದ ಐದನೇ ಮಹಡಿಯನ್ನು ತಲುಪಲು ಸಾಧ್ಯವಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಿಸಿದ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಯಿತು.
ಕಿರಿಯ ಪುತ್ರಿಯ ಶವವು ತಾಯಿಯ ಮೃತದೇಹಕ್ಕೆ ಅಂಟಿಕೊಂಡಿದ್ದ ಸ್ಥಿತಿಯಲ್ಲಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದರು.
30 ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿಸಲಾಗಿದ್ದು,ನಸುಕಿನ ಎರಡು ಗಂಟೆಯ ಸುಮಾರಿಗೆ ಲಕ್ನೋದಿಂದ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ(ಎಸ್‌ಆರ್‌ಡಿಎಸ್) ತಂಡವೂ ಘಟನಾ ಸ್ಥಳವನ್ನು ತಲುಪಿತ್ತು. ಕಿರಿದಾದ ಓಣಿಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿತ್ತು. ಕಟ್ಟಡದ ಸುತ್ತ 500 ಮೀ.ಪ್ರದೇಶದಲ್ಲಿ ಜನಸಂಚಾರವನ್ನು ನಿರ್ಬಂಧಿಸಲಾಗಿತ್ತು ಮತ್ತು ಸಮೀಪದ ಎಲ್ಲ ಕಟ್ಟಡಗಳಿಂದ ಜನರನ್ನು ತೆರವುಗೊಳಿಸಲಾಗಿತ್ತು.
ಬೆಂಕಿಗೆ ತುತ್ತಾದ ಕುಟುಂಬದಲ್ಲಿ ಮೂವರು ಸೋದರರ ಕುಟುಂಬಗಳು ವಾಸವಾಗಿದ್ದವು. ಮೃತ ವ್ಯಕ್ತಿಯ ಇಬ್ಬರು ಸೋದರರು ತಮ್ಮ ಕುಟುಂಬಗಳೊಂದಿಗೆ ಮೂರು ಮತ್ತು ನಾಲ್ಕನೇ ಅಂತಸ್ತುಗಳಲ್ಲಿ ವಾಸವಿದ್ದರು.
ಕಟ್ಟಡದ ತಳಅಂತಸ್ತಿನಲ್ಲಿದ್ದ ಶೂ ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಉಂಟಾಗಿದ್ದಿರಬಹುದು ಎಂದು ಪ್ರಾಥಮಿಕ ತನಿಖೆಯು ಸೂಚಿಸಿದೆ