Haryanaದ ಫರೀದಾಬಾದ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ |ಆ್ಯಂಬುಲೆನ್ಸ್ ಸುರಕ್ಷಿತ ಎಂದು ಭಾವಿಸಿ ʼಲಿಫ್ಟ್ʼ ಕೇಳಿದ್ದ ಸಂತ್ರಸ್ತೆ!
ಸಾಂದರ್ಭಿಕ ಚಿತ್ರ
ಗುರುಗ್ರಾಮ,ಜ.4: ಡಿ.30ರಂದು ಚಲಿಸುತ್ತಿದ್ದ ವಾಹನದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 25 ವರ್ಷದ ಸಂತ್ರಸ್ತೆಯ ಕುಟುಂಬವು, ಅಪರಾಧವು ಆ್ಯಂಬುಲೆನ್ಸ್‌ನೊಳಗೆ ನಡೆದಿತ್ತು ಎಂದು ಆರೋಪಿಸಿದೆ. ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಇಬ್ಬರು ದುಷ್ಕರ್ಮಿಗಳು ಆಕೆಯೊಂದಿಗೆ ಕ್ರೂರವಾಗಿ ವರ್ತಿಸಿ ಚಲಿಸುತ್ತಿದ್ದ ವಾಹನದಿಂದ ಹೊರಕ್ಕೆಸೆದಿದ್ದರು.
ತಡರಾತ್ರಿ ದಟ್ಟವಾದ ಮಂಜಿನ ನಡುವೆ ತನ್ನ ಮನೆಗೆ ಮರಳುತ್ತಿದ್ದ ಮಹಿಳೆ, ಆ ದಾರಿಯಾಗಿ ಬರುತ್ತಿದ್ದ ಇಕೋ ವ್ಯಾನ್ ಆ್ಯಂಬುಲೆನ್ಸ್ ಆಗಿದ್ದರಿಂದ ಅದನ್ನು ನಂಬಿ ಲಿಫ್ಟ್ ಕೇಳಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪೋಲಿಸರು ವಶಕ್ಕೆ ತೆಗೆದುಕೊಂಡಿರುವ ಇಬ್ಬರು ವ್ಯಕ್ತಿಗಳು ನೋಯ್ಡಾ ಮತ್ತು ಫರೀದಾಬಾದ್ ನಲ್ಲಿ ಶಾಖೆಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿಯಾಗಿದ್ದಾರೆ ಎಂದು ಕುಟುಂಬವು ಆರೋಪಿಸಿದೆ. ಶಂಕಿತರನ್ನು ಬಂಧಿಸಿದ ಬಳಿಕ ಪೋಲಿಸರು ಇಕೋ ವ್ಯಾನ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅದನ್ನು ನಿಜಕ್ಕೂ ಆ್ಯಂಬುಲೆನ್ಸ್ ಆಗಿ ಬಳಸಲಾಗಿತ್ತೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.
ಪೋಲಿಸರು ಗುರುತು ಪತ್ತೆ ಪರೇಡ್ ಗಾಗಿ ಕಾಯುತ್ತಿದ್ದು, ಸಂತ್ರಸ್ತೆ ಚೇತರಿಸಿಕೊಂಡ ಬಳಿಕವೇ ಅದು ಸಾಧ್ಯವಾಗಲಿದೆ. ಮುಖ, ಕಣ್ಣುಗಳು ಮತ್ತು ಭುಜಗಳಿಗೆ ತೀವ್ರ ಗಾಯಗೊಂಡಿರುವ ಆಕೆಗೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ, ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚವನ್ನು ಭರಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿರುವ ಸಂತ್ರಸ್ತೆಯ ಅಕ್ಕ ನೆರವಿಗಾಗಿ ಕೋರಿದ್ದಾರೆ. ಕುಟುಂಬವು ಈಗಾಗಲೇ 45,000 ರೂ.ಗಳನ್ನು ಆಸ್ಪತ್ರೆಗೆ ಪಾವತಿಸಿದೆ. ಹಲವರು ಆಸ್ಪತ್ರೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದ್ದರೂ ಈವರೆಗೆ ಯಾರೂ ಹಣ ನೀಡಿಲ್ಲ ಎಂದು ಅವರು ಹೇಳಿದರು.
ಆಸ್ಪತ್ರೆಯಲ್ಲಿರುವ ಸಂತ್ರಸ್ತೆಯನ್ನು ಭೇಟಿಯಾಗಲು ಕುಟುಂಬಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಆಕೆ ಆರೋಪಿಸಿದರು. ಇದನ್ನು ಅಲ್ಲಗಳೆದ ಪೊಲೀಸ್ ಅಧಿಕಾರಿಯೋರ್ವರು, ವೈದ್ಯರ ಸಲಹೆಯ ಮೇರೆಗೆ ರೋಗಿ ಸೋಂಕಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಸಂತ್ರಸ್ತೆಯ ಇಬ್ಬರು ಪುಟ್ಟ ಮಕ್ಕಳು ಪ್ರಸ್ತುತ ತಮ್ಮ ಅಜ್ಜಿಯೊಂದಿಗೆ ವಾಸವಾಗಿದ್ದಾರೆ. ಮಹಿಳೆಗೆ ನಾಲ್ವರು ಸೋದರಿಯರು ಇದ್ದಾರೆ. ಆಕೆಯ ಪತಿ ದಿಲ್ಲಿಯಲ್ಲಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.