ಶ್ರೀಲಂಕಾ ನೌಕಾಪಡೆಯ ಹಡಗು ಢಿಕ್ಕಿ ಹೊಡೆದು ಮೀನುಗಾರ ಮೃತ್ಯು | ರಾಮೇಶ್ವರದಲ್ಲಿ ಮೀನುಗಾರರಿಂದ ಅನಿರ್ದಿಷ್ಟಾವಧಿ ಮುಷ್ಕರ
ಸಾಂದರ್ಭಿಕ ಚಿತ್ರ
ಚೆನ್ನೈ : ಶ್ರೀಲಂಕಾ ನೌಕಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಮೀನುಗಾರ ಮೃತಪಟ್ಟಿರುವುದನ್ನು ಹಾಗೂ ಇಬ್ಬರು ಮೀನುಗಾರರನ್ನು ಅದು ಬಂಧಿಸಿರುವುದನ್ನು ಪ್ರತಿಭಟಿಸಿ ಮೀನುಗಾರ ಸಂಘಟನೆಗಳು ತಮಿಳುನಾಡಿನ ರಾಮೇಶ್ವರದಲ್ಲಿ ಅನಿರ್ದಿಷ್ಟ ಮುಷ್ಕರ ಆರಂಭಿಸಿವೆ.
ತಮಿಳುನಾಡು ಮತ್ತು ಕೇಂದ್ರ ಸರಕಾರಗಳು ತಮ್ಮ ಸಂಕಷ್ಟಗಳನ್ನು ಪರಿಹರಿಸಿದ ಬಳಿಕವಷ್ಟೇ ತಾವು ಮೀನುಗಾರಿಕೆಯನ್ನು ಪುನರಾರಂಭಿಸುವುದಾಗಿ ಸಂಘಟನೆಗಳು ಘೋಷಿಸಿವೆ.
ಶ್ರೀಲಂಕಾದ ಜೈಲುಗಳಲ್ಲಿರುವ ತಮಿಳುನಾಡಿನ ಎಲ್ಲಾ ಮೀನುಗಾರರು ಬಿಡುಗಡೆಗೊಳ್ಳುವವರೆಗೆ ಮತ್ತು ಮುಟ್ಟುಗೋಲು ಹಾಕಲಾಗಿರುವ ತಮ್ಮ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಹಿಂದಿರುಗಿಸುವ ಅಥವಾ ದುರಸ್ತಿ ಸಾಧ್ಯವಾಗದ ದೋಣಿಗಳಿಗೆ ಪರಿಹಾರ ನೀಡುವವರೆಗೆ ಎಲ್ಲಾ ವಾಣಿಜ್ಯ ಮೀನುಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಶುಕ್ರವಾರ ನಡೆದ ಸಭೆಯೊಂದರಲ್ಲಿ ಅವು ನಿರ್ಧರಿಸಿವೆ.
ಈ ವಾರದ ಆರಂಭದಲ್ಲಿ, ಸಮುದ್ರ ಮಧ್ಯದಲ್ಲಿ ಶ್ರೀಲಂಕಾ ನೌಕಾ ಪಡೆಯ ಹಡಗೊಂದು ಮೀನುಗಾರಿಕಾ ದೋಣಿಯೊಂದಕ್ಕೆ ಢಿಕ್ಕಿ ಹೊಡದಾಗ 59 ವರ್ಷದ ಮೀನುಗಾರ ಕೆ. ಮಲೈಸಾಮಿ ಮೃತಪಟ್ಟಿದ್ದಾರೆ.
ಬುಧವಾರ ನಾಲ್ವರು ಮೀನುಗಾರರು ದೋಣಿಯೊಂದರಲ್ಲಿ ನೆಡುಂತೀವು ದ್ವೀಪದ ಸಮೀಪ ಮೀನುಗಾರಿಕೆ ನಡೆಸುತ್ತಿದ್ದಾಗ, ಶ್ರೀಲಂಕಾ ನೌಕಾಪಡೆಯ ಕಣ್ಗಾವಲು ಹಡಗೊಂದು ಅವರ ದೋಣಿಗೆ ಢಿಕ್ಕಿಯಾಗಿತ್ತು ಎನ್ನಲಾಗಿದೆ. ಢಿಕ್ಕಿಯ ಪರಿಣಾಮವಾಗಿ ದೋಣಿಯು ಮುಳುಗಿತ್ತು.
ಘಟನೆಯಲ್ಲಿ ಮಲೈಸಾಮಿ ಮೃತಪಟ್ಟಿದ್ದಾರೆ. ಇನ್ನೋರ್ವ ಮೀನುಗಾರ 54 ವರ್ಷದ ವಿ. ರಾಮಚಂದ್ರನ್ ನಾಪತ್ತೆಯಾಗಿದ್ದಾರೆ. ಇತರ ಇಬ್ಬರು ಮೀನುಗಾರರಾದ ಮೂಕಯ್ಯ (54) ಮತ್ತು ಮುತ್ತು ಮುನಿಯಂಡಿ (57) ಅವರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದೆ.
ಕೇಂದ್ರ ಸರಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಮೀನುಗಾರ ನಾಯಕ ಸಗಯಮ್ ಒತ್ತಾಯಿಸಿದ್ದಾರೆ. ಅದೇ ವೇಳೆ, ತಕ್ಷಣ ಸ್ಪಂದಿಸಿದ ತಮಿಳುನಾಡು ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅದೂ ಅಲ್ಲದೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.