“ಶೋಭಾಯಾತ್ರೆ ನಡೆಸುವ ಬದಲು ದೇವಾಲಯಗಳಿಗೆ ಹೋಗಿ”; ಯಾತ್ರೆಗೆ ಅನುಮತಿ ನಿರಾಕರಿಸಿದ ಹರ್ಯಾಣ ಸಿಎಂ
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (PTI)
ಚಂಡೀಗಢ: ಇಂದು (ಸೋಮವಾರ) ನಡೆಯಬೇಕಿದ್ದ ವಿಶ‍್ವ ಹಿಂದೂ ಪರಿಷತ್ ನ 'ಬೃಜ್ ಮಂಡಲ್ ಶೋಭಾಯಾತ್ರೆ’ಗೆ ಅನುಮತಿ ನಿರಾಕರಿಸಿದ್ದಕ್ಕೆ ಇರುವ ಕಾರಣಗಳನ್ನು ಕುರಿತು ಪ್ರತಿಕ್ರಿಯಿಸಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಒಂದು ತಿಂಗಳ ಹಿಂದೆ ನೂಹ್ ಜಿಲ್ಲೆಯಲ್ಲಿ ನಡೆದಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು freepressjournal.in ವರದಿ ಮಾಡಿದೆ.
“ನಾವು ಮೊದಲು ಜನರಿಗೆ ಮನವಿ ಮಾಡಿದೆವು ಹಾಗೂ ನಂತರ ಯಾತ್ರೆ ನಡೆಸುವ ಬದಲು ಜನರು ಸ್ಥಳೀಯ ದೇವಾಲಯಗಳಿಗೆ ತೆರಳಿ ಜಲಾಭಿಷೇಕ ಸಮಾರಂಭ ಅಥವಾ ಕಾರ್ಯಕ್ರಮಗಳನ್ನು ನೆರವೇರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದೆವು” ಎಂದು ಖಟ್ಟರ್ ಹೇಳಿದ್ದಾರೆ.
ಪ್ರದರ್ಶನದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುವ ಬದಲು ಜನರು ಹತ್ತಿರದಲ್ಲೇ ಇರುವ ದೇವಾಲಯಗಳಿಗೆ ತೆರಳಿ ಜಲಾಭಿಷೇಕ ನೆರವೇರಿಸಬೇಕು ಎಂದೂ ಖಟ್ಟರ್ ಜನರಲ್ಲಿ ಮನವಿ ಮಾಡಿದ್ದಾರೆ.
ಜನರ ನಂಬಿಕೆಗಳನ್ನು ಪರಿಗಣಿಸಿ, ಸೋಮವಾರ ದೇವಾಲಯಗಳಲ್ಲಿ ಜಲಾಭಿಷೇಕ ನೆರವೇರಿಸಲು ಅನುಮತಿ ನೀಡಲಾಗಿದೆಯೇ ಹೊರತು ಯಾವುದೇ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದೂ ಖಟ್ಟರ್ ಸ್ಪಷ್ಟಪಡಿಸಿದ್ದಾರೆ.
ಹೀಗಿದ್ದೂ, ‘ಬೃಜ್ ಮಂಡಲ್ ಶೋಭಾ ಯಾತ್ರೆ’ ನಡೆಸಲು ತನಗೆ ಯಾವುದೇ ಅನುಮತಿಯ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ವಿಶ್ವ ಹಿಂದೂ ಪರಿಷತ್, ಯೋಜನೆಯಂತೆಯೇ ಸೋಮವಾರ ಬೆಳಗ್ಗೆ 11 ಗಂಟೆಗೆ ಯಾತ್ರೆ ನಡೆಯಲಿದೆ ಎಂದು ಪ್ರಕಟಿಸಿದೆ. ಇದರೊಂದಿಗೆ ಜಲಾಭಿಷೇಕ ಯಾತ್ರೆಯು ನಾಳೆ (ಮಂಗಳವಾರ) ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದೂ ಹೇಳಿದೆ.
ಸೋಮವಾರ ನೂಹ್ ನಲ್ಲಿ ಯಾತ್ರೆ ನಡೆಸಲು ಹರಿಯಾಣ ಸರ್ಕಾರವು ಅನುಮತಿ ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಬನ್ಸಾಲ್, ಇದು ಧಾರ್ಮಿಕ ಯಾತ್ರೆಯಾಗಿರುವುದರಿಂದ, ಇದಕ್ಕೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಜುಲೈ 3ರಂದು ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ನೂಹ್ ಜಿಲ್ಲೆಯಲ್ಲಿ 6 ಮಂದಿ ಮೃತಪಟ್ಟು, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಭಾರಿ ಪ್ರಮಾಣದ ಹಾನಿಯುಂಟಾಗಿತ್ತು. ಈ ಅವಧಿಯಲ್ಲಿ ನೂಹ್ ಜಿಲ್ಲೆಯಾದ್ಯಂತ ಸ್ಥಳೀಯ ನಿವಾಸಿಗಳಿಗೆ ಸೀಮಿತ ವಿನಾಯಿತಿ ಒದಗಿಸಿ ನಿಷೇಧಾಜ್ಞೆ ಹೇರಲಾಗಿತ್ತು. ಈಗಲೂ ಕೋಮು ಸಂಘರ್ಷ ಸಾಧ್ಯತೆಯನ್ನು ತಡೆಯಲು ನೂಹ್ ಜಿಲ್ಲೆಯಾದ್ಯಂತ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.