×
Ad

ಗೋದಾವರಿ ನೀರು ದುರುಪಯೋಗ ಆರೋಪ: ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತೆಲಂಗಾಣ–ಆಂಧ್ರ ವಿವಾದ

Update: 2026-01-06 07:40 IST

PC: PTI

ಹೊಸದಿಲ್ಲಿ: ಆಂಧ್ರಪ್ರದೇಶದ ಎನ್.ಚಂದ್ರಬಾಬು ನಾಯ್ಡು ಸರ್ಕಾರ ಪೋಲಾವರಂ-ನಲ್ಲಮಾಲಾ ಸಾಗರ ಯೋಜನೆ (ಪಿಎನ್ಎಸ್ಪಿ) ಮೂಲಕ ಗೋದಾವರಿ ನೀರಿನ ಪಾಲನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ತೆಲಂಗಾಣದ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದೆ. ಇದಕ್ಕೆ ಪ್ರತಿಯಾಗಿ ತೆಲಂಗಾಣದ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ, ರಾಜಧಾನಿ ಹೈದರಾಬಾದನ್ನು ವಶಪಡಿಸಿಕೊಂಡ ಬಳಿಕ ಇದೀಗ ರೈತಸ್ನೇಹಿ ಯೋಜನೆಯನ್ನು ತಡೆಯುವ ಹುನ್ನಾರ ನಡೆಸಿದೆ ಎಂದು ಆಂಧ್ರದ ವಿರುದ್ಧ ಪ್ರತ್ಯಾರೋಪ ಮಾಡಿದೆ.

ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರ ಮೂಲಕ ವಾದ ಮಂಡಿಸಿದ ತೆಲಂಗಾಣ, ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಲ್ಯಾ ಬಗ್ಚಿ ಅವರಿದ್ದ ನ್ಯಾಯಪೀಠದ ಮುಂದೆ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆ ಒತ್ತಾಯಿಸಿತು. ಜತೆಗೆ ಪಿಎನ್ಎಸ್‌ಪಿ ಯ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದನ್ನು ತಡೆಯುವಂತೆ ಆಗ್ರಹಿಸಿತು. ಕೇಂದ್ರ ಸರ್ಕಾರ ರಚಿಸಿದ ಕೇಂದ್ರೀಯ ಜಲ ಆಯೋಗವು ಯೋಜನೆ ಮುಂದುವರಿಸದಂತೆ ಆಂಧ್ರಕ್ಕೆ ತಾಕೀತು ಮಾಡಿದ್ದರೂ, ಯೋಜನೆ ಮುಂದುವರಿಸಲು ಆಂಧ್ರ ನಿರ್ಧರಿಸಿದೆ ಎಂದು ಅವರು ಆಪಾದಿಸಿದರು.

ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಒಳಗೊಂಡಂತೆ ಉಭಯ ರಾಜ್ಯಗಳ ನಡುವೆ ಗೋದಾವರಿ ನೀರು ಹಂಚಿಕೆಯನ್ನು ಜಾರಿಗೊಳಿಸುವ ವಿವಾದಕ್ಕೆ ಸಂಬಂಧಿಸಿದ ಪ್ರಮುಖ ವಿಚಾರ ಇರುವ ಸಂದರ್ಭದಲ್ಲಿ ತೆಲಂಗಾಣದ ರಿಟ್ ಅರ್ಜಿ ಎಷ್ಟರಮಟ್ಟಿಗೆ ಸಮರ್ಥನೀಯ ಎಂದು ಕೋರ್ಟ್ ಪ್ರಶ್ನಿಸಿತು. ಆಂಧ್ರ, ಕರ್ನಾಟಕ ಮತ್ತು ಮಹಾರಾಷ್ಟ್ರಗಳನ್ನೂ ಸೇರಿಸಿ ಸಂವಿಧಾನದ 131ನೇ ವಿಧಿಯ ಅಡಿಯಲ್ಲಿ ದಾವೆ ಸಲ್ಲಿಸಲು ಬಯಸುತ್ತದೆಯೇ ಎಂಬ ಬಗ್ಗೆ ವಾರದೊಳಗೆ ಸೂಚನೆ ಪಡೆಯುವಂತೆ ಸಿಂಘ್ವಿ ಅವರಿಗೆ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿತು.

ಆಂಧ್ರಪ್ರದೇಶ ರಾಜ್ಯ ವಿಂಗಡಣೆ ವೇಳೆ ತೆಲಂಗಾಣ ಈ ಯೋಜನೆಗೆ ಒಪ್ಪಿಗೆ ನೀಡಿತ್ತು ಎಂದು ಆಂಧ್ರಪ್ರದೇಶ ತನ್ನ ವಕೀಲರಾದ ಮುಕುಲ್ ರೋಹಟ್ಗಿ, ಜೈದೀಪ್ ಗುಪ್ತಾ ಮತ್ತು ಬಲಬೀರ್ ಸಿಂಗ್ ಅವರ ಮೂಲಕ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News