ಕೇರಳ ಹೈಕೋರ್ಟ್ ನ್ಯಾಯಾಧೀಶರ ನಿವಾಸದಲ್ಲಿ ಚಿನ್ನಾಭರಣ ಕಳವು!
ಸಾಂದರ್ಭಿಕ ಚಿತ್ರ | PC : NDTV
ಕೊಚ್ಚಿ: ತನ್ನ ನಿವಾಸದಿಂದ ಆರು ಪವನ್ ಚಿನ್ನಾಭರಣ ನಾಪತ್ತೆಯಾಗಿದೆ ಎಂದು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ.ಎ.ಬದ್ರುದ್ದೀನ್ ಅವರು ಸಲ್ಲಿಸಿರುವ ದೂರಿನ ಮೇರೆಗೆ ಕೊಚ್ಚಿ ಪೋಲಿಸರು ಕಳ್ಳತನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನ್ಯಾಯಾಧೀಶರ ಬೆಡ್‌ರೂಂನಿಂದ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಗುರುವಾರ ಕಳಮಶೇರಿ ಪೋಲಿಸ್ ಠಾಣೆಯಲ್ಲಿ ಸಲ್ಲಿಸಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ವಾಣಿಜ್ಯ ನಗರಿಯ ಹೃದಯಭಾಗದಲ್ಲಿರುವ ಅತ್ಯಂತ ಬಿಗಿ ಭದ್ರತೆಯ ನಿವಾಸದಿಂದ ಚಿನ್ನ ಕಳವು ಮಾಡಿರುವುದು ಅನೇಕರಿಗೆ ಅಚ್ಚರಿಯನ್ನುಂಟುಮಾಡಿದೆ. ಹಿರಿಯ ನ್ಯಾಯಾಧೀಶರ ಬೆಡ್‌ರೂಂನಲ್ಲಿ ಕಳವು ನಡೆದಿರುವುದರಿಂದ ಪ್ರಾಥಮಿಕ ತನಿಖೆಯ ಬಳಿಕ ಪೋಲಿಸರು ತಾವು ಪ್ರಶ್ನಿಸಬೇಕಾದವರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ.
ಘಟನೆಯು ರಾಜ್ಯದಲ್ಲಿನ ಭದ್ರತಾ ಸ್ಥಿತಿಯ ಬಗ್ಗೆ ಕಳವಳವನ್ನು ಸೃಷ್ಟಿಸಿದೆ. ಅಪರಾಧಗಳನ್ನು ತಡೆಯುವಲ್ಲಿ ರಾಜ್ಯ ಸರಕಾರವು ವಿಫಲಗೊಳ್ಳುತ್ತಿದೆ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸುತ್ತಲೇ ಬಂದಿದೆ.
ಕೇರಳವು ಮನೆಗಳ್ಳತನದಲ್ಲಿ ನಿಪುಣರಾಗಿರುವ ನೆರೆ ರಾಜ್ಯಗಳ ಸಂಘಟಿತ ಗುಂಪುಗಳ ಪಾಲಿಗೆ ಸ್ವರ್ಗವಾಗಿದೆ ಎನ್ನುವುದು ಕಂಡು ಬಂದಿದ್ದು,ಕೇರಳಿಯೇತರ ಕಳ್ಳರ ವಿರುದ್ಧ ಪ್ರಕರಣಗಳು ಹೆಚ್ಚುತ್ತಿವೆ.
ಗೃಹ ಸಚಿವಾಲಯವು ಕಳೆದ ವರ್ಷ ವಿಧಾನಸಭೆಯಲ್ಲಿ ಮಂಡಿಸಿದ್ದ ವರದಿಯ ಪ್ರಕಾರ 2021ರಲ್ಲಿ ರಾಜ್ಯದಲ್ಲಿ ಕೇರಳಿಯೇತರರು ಭಾಗಿಯಾಗಿದ್ದ 192 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇಂತಹ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದ್ದು, 2022ರಲ್ಲಿ 360ಕ್ಕೆ, 2023ರಲ್ಲಿ 519ಕ್ಕೆ ಏರಿಕೆಯಾಗಿದ್ದರೆ ಸೆ.2024ರ ವೇಳೆಗೆ 307 ಪ್ರಕರಣಗಳು ದಾಖಲಾಗಿದ್ದವು.
ಆದರೆ ಈಗ ಹಿರಿಯ ನ್ಯಾಯಾಧೀಶರ ಮನೆಯಲ್ಲಿಯೇ ಕಳ್ಳತನವಾಗಿರುವುದು ಕೇರಳ ಪೋಲಿಸರಿಗೆ ಕಠಿಣ ಸವಾಲನ್ನೊಡ್ಡಿದೆ.