×
Ad

ತಾವು ಚುನಾಯಿತ ಪ್ರತಿನಿಧಿಗಳಲ್ಲ ಎನ್ನುವುದು ರಾಜ್ಯಪಾಲರಿಗೆ ಗೊತ್ತಿರಬೇಕು: ಸುಪ್ರೀಂ ಕೋರ್ಟ್

Update: 2023-11-06 20:12 IST

Photo- PTI

ಹೊಸದಿಲ್ಲಿ : ರಾಜ್ಯ ವಿಧಾನಸಭೆಗಳು ಅಂಗೀಕರಿಸುವ ಮಸೂದೆಗಳು ಸುಪ್ರೀಂ ಕೋರ್ಟ್‌ಗೆ ಬರುವ ಮೊದಲೇ ರಾಜ್ಯಪಾಲರುಗಳು ಅವುಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮಸೂದೆಗಳಿಗೆ ಅನುಮೋದನೆ ನೀಡಲು ವಿಳಂಬಿಸುತ್ತಾರೆ ಎಂದು ಆರೋಪಿಸಿ ಪಂಜಾಬ್ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘‘ಈ ವಿಷಯಗಳು ಸುಪ್ರೀಂ ಕೋರ್ಟ್‌ಗೆ ಬರುವ ಮೊದಲೇ ರಾಜ್ಯಪಾಲರುಗಳು ಕ್ರಮ ತೆಗೆದುಕೊಳ್ಳಬೇಕು. ವಿಷಯ ಸುಪ್ರೀಂ ಕೋರ್ಟ್‌ಗೆ ಬರುವಾಗ ಮಾತ್ರ ರಾಜ್ಯಪಾಲರು ಕ್ರಮ ತೆಗೆದುಕೊಳ್ಳುವ ಸಂಪ್ರದಾಯ ಕೊನೆಗೊಳ್ಳಬೇಕು. ರಾಜ್ಯಪಾಲರು ಕೊಂಚ ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಅದೂ ಅಲ್ಲದೆ, ತಾವು ಜನರಿಂದ ಆಯ್ಕೆಯಾಗಿರುವ ಚುನಾಯಿತಿ ಪ್ರತಿನಿಧಿಗಳು ಅಲ್ಲ ಎನ್ನುವುದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕು’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ಹೇಳಿತು.

ಪಂಜಾಬ್ ರಾಜ್ಯಪಾಲರು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಷ್ಕೃತ ಸ್ಥಿತಿಗತಿ ವರದಿಯೊಂದನ್ನು ಸಲ್ಲಿಸುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿತು ಹಾಗೂ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರಕಾರ ಅಂಗೀಕರಿಸಿರುವ 27 ಮಸೂದೆಗಳ ಪೈಕಿ 22 ಮಸೂದೆಗಳಿಗೆ ರಾಜ್ಯಪಾಲ ಪುರೋಹಿತ್ ಅಂಗೀಕಾರ ನೀಡಿದ್ದಾರೆ.

ಅ.20ರಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ, ಮೂರು ಹಣಕಾಸು ಮಸೂದೆಗಳನ್ನು ಮಂಡಿಸುವುದಾಗಿ ಪಂಜಾಬ್ ಸರಕಾರ ಘೋಷಿಸಿತ್ತು. ಇದಕ್ಕೆ ಸಂಬಂಧಿಸಿದ ಸರಕಾರ ಮತ್ತು ರಾಜ್ಯಪಾಲರ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿದೆ.

ನ.1ರಂದು, ಪುರೋಹಿತ್ ಮೂರು ಹಣಕಾಸು ಮಸೂದೆಗಳ ಪೈಕಿ ಎರಡಕ್ಕೆ ಅನುಮೋದನೆ ನೀಡಿದರು. ಪ್ರಸ್ತಾಪಿತ ಮಸೂದೆಗಳನ್ನು ಮಂಡಿಸಲು ಅನುಮತಿ ನೀಡುವ ಮುನ್ನ ಎಲ್ಲಾ ಪ್ರಸ್ತಾಪಿತ ಮಸೂದೆಗಳನ್ನು ಪರಿಶೀಲಿಸುವುದಾಗಿ ಇದಕ್ಕೂ ಮುನ್ನ ರಾಜ್ಯಪಾಲರು ಸರಕಾರಕ್ಕೆ ಪತ್ರ ಬರೆದಿದ್ದರು.

ಆದರೆ, ಅದಕ್ಕೂ ಮುನ್ನ ಅವರು ಈ ಮಸೂದೆಗಳನ್ನು ತಡೆಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News