×
Ad

ದಾರಿ ತಪ್ಪಿಸಿದ ಜಿಪಿಎಸ್: ಇಬ್ಬರು ವೈದ್ಯರು ಮೃತ್ಯು

Update: 2023-10-02 08:34 IST

ಕೊಚ್ಚಿನ್: ಕಾರ್ಗತ್ತಲು ಮತ್ತು ಸುರಿಯುವ ಮಳೆಯಲ್ಲಿ ವಾಹನ ಚಲಾಯಿಸಲು ಜಿಪಿಎಸ್ ಮೊರೆ ಹೋದ ಇಬ್ಬರು ವೈದ್ಯರು, ಜಿಪಿಎಸ್ ನಿರ್ದೇಶಿಸಿದ ರಸ್ತೆಯಲ್ಲಿ ತೆರಳಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಘಟನೆ ವರದಿಯಾಗಿದೆ.

ಹೋಂಡಾ ಸಿವಿಕ್ ಕಾರು ಚಲಾಯಿಸುತ್ತಿದ್ದ ಡಾ.ಅದ್ವೈತ್ ಸುರಿಯುತ್ತಿದ್ದ ಮಳೆಯ ನಡುವೆ ಅಪರಿಚಿತ ರಸ್ತೆಯಲ್ಲಿ ಮಾರ್ಗದರ್ಶನಕ್ಕಾಗಿ ಜಿಪಿಎಸ್ ಮೊರೆ ಹೋಗಿದ್ದರು. ನೀರು ನಿಂತ ಜಾಗವನ್ನು ತಲುಪಿದಾಗ ಜಿಪಿಎಸ್ ಮಾರ್ಗನಕ್ಷೆ ನೇರ ಮಾರ್ಗವಿದೆ ಎಂಬ ಸೂಚನೆ ನೀಡಿದೆ. ಕಾರು ನೇರವಾಗಿ ಚಲಿಸಿದಾಗ ತುಂಬಿ ಹರಿಯುತ್ತಿದ್ದ ಹೊಳೆಯನ್ನು ತಲುಪಿ ಕಾರು ಮುಳುಗಿತು. ಕಾರಿನಲ್ಲಿದ್ದ ಡಾ.ಅದ್ವೈತ್ ಹಾಗೂ ಡಾ.ಅಜ್ಮಲ್ ಆಸೀಫ್ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಇದೇ ಕಾರಿನಲ್ಲಿದ್ದ ಇತರ ಮೂವರು ಕಾರಿನಿಂದ ಹೊರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದು, ಇವರನ್ನು ರಕ್ಷಿಸಲಾಗಿದೆ.

ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಗೊತುರುತ್ ಎಂಬಲ್ಲಿ ಈ ಘಟನೆ ನಡೆದಿದೆ. ಶನಿವಾರ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಡಾ.ಅದ್ವೈತ್ ಬರ್ತ್ಡೇ ಖರೀದಿಗಾಗಿ ಕೊಚ್ಚಿನ್ ಗೆ  ತೆರಳಿದ್ದು, ಅಲ್ಲಿಂದ ಕೊಡುಂಗಲ್ಲೂರಿಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ.

ಜಿಪಿಎಸ್ ನಕ್ಷೆಯಲ್ಲಿ ಮಾರ್ಗವನ್ನು ಬದಲಿಸಲು ಸೂಚನೆ ಬಂದ ಹಿನ್ನೆಲೆಯಲ್ಲಿ ಅದಕ್ಕೆ ಅನುಗುಣವಾಗಿ ಮುಂದುವರಿದಾಗ ಈ ದುರಂತ ಸಂಭವಿಸಿದ್ದಾಗಿ ಬದುಕಿ ಉಳಿದವರ ಪೈಕಿ ಒಬ್ಬರಾದ ಡಾ. ಗಝೀಕ್ ತಬ್ಸೀರ್ ಹೇಳಿದ್ದಾರೆ ಎಂದು ಕೊಡುಂಗಲ್ಲೂರು ಕ್ರಾಫ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಅಶೋಕ್ ರವಿ ಹೇಳಿದ್ದಾರೆ. "ನಾವು ಜಿಪಿಎಸ್ ಬಳಸುತ್ತಿದ್ದೆವು. ನಾನು ವಾಹನ ಚಾಲನೆ ಮಾಡುತ್ತಿರಲಿಲ್ಲವಾದ್ದರಿಂದ ಇದು ಅಪ್ಲಿಕೇಶನ್ ನ ತಾಂತ್ರಿಕ ದೋಷವೇ ಅಥವಾ ಮಾನವ ಪ್ರಮಾದವೇ ಎನ್ನುವುದನ್ನು ದೃಢಪಡಿಸುವಂತಿಲ್ಲ" ಎಂದು ಅವರು ಸ್ಪಷ್ಟಪಡಿಸಿದರು.

"ಡಾ.ಅದ್ವೈತ್ ಅವರ ಹುಟ್ಟುಹಬ್ಬದ ಅಂಗವಾಗಿ ವೈದ್ಯರು ಪುರುಷ ನರ್ಸ್ ಜತೆ ಪಾರ್ಟಿಗೆ ತೆರಳಿದ್ದರು. ಡಾ.ಅಜ್ಮಲ್ ಅವರ ಭಾವಿ ಪತ್ನಿ ಕೂಡಾ ಜತೆಗಿದ್ದರು" ಎಂದು ರವಿ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News