ನೋಯ್ಡಾ | ವರದಕ್ಷಿಣೆ ಕಿರುಕುಳ: ಬೆಂಕಿ ಹಚ್ಚಿ ಪತ್ನಿಯನ್ನು ಕೊಂದ ಪತಿ!
ಸಾಂದರ್ಭಿಕ ಚಿತ್ರ
ನೋಯ್ಡಾ: ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿ ಮತ್ತು ಬಾವಂದಿರು ಬೆಂಕಿ ಹಚ್ಚಿ 28 ವರ್ಷದ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ ಅಮಾನುಷ ಘಟನೆ ಗ್ರೇಟರ್ ನೋಯ್ಡಾದಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಈ ಸಂಬಂಧ ಪತಿ ವಿಪಿನ್ ಭಾತಿ (28) ಎಂಬಾತನನ್ನು ಬಂಧಿಸಲಾಗಿದ್ದು, ಮಾವ ಸತ್ಯವೀರ ಭಾತಿ ಮತ್ತು ಭಾವ ರೋಹಿತ್ ಭಾತಿ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ಈ ಘಟನೆ ಆ.21ರಂದು ನಡೆದಿದೆ. ಮೃತ ಮಹಿಳೆಯನ್ನು ನಿಕ್ಕಿ ಎಂದು ಗುರುತಿಸಲಾಗಿದ್ದು, ಈಕೆಯನ್ನು ಬೆಂಕಿ ಹತ್ತಿಕೊಳ್ಳುವ ದ್ರಾವಣದಲ್ಲಿ ಮುಳುಗಿಸಿ ಬೆಂಕಿ ಹಚ್ಚಲಾಗಿದೆ. 35 ಲಕ್ಷ ರೂ. ವರದಕ್ಷಿಣೆ ತರುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯಿಂದ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಹಿಳೆ ಮೃತಪಟ್ಟಿದ್ದಾಳೆ.
ನಿಕ್ಕಿಯ ಅತ್ತೆ ದಯಾ, ಮಾವ ಸತ್ಯವೀರ್ ಮತ್ತು ಭಾವ ರೋಹಿತ್ ಹೆಸರು ಕೂಡಾ ಎಫ್‍ಐಆರ್‌ನಲ್ಲಿದೆ. ವಿಪಿನ್ ಕುಟುಂಬ ಕಿರಾಣಿ ಅಂಗಡಿಯೊಂದನ್ನು ನಿರ್ವಹಿಸುತ್ತಿತ್ತು. ದೂರು ನೀಡಿದ ತಕ್ಷಣ ವಿಪಿನ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಹಲವು ವರ್ಷಗಳಿಂದ ನೀಡುತ್ತಿದ್ದ ಕಿರುಕುಳವನ್ನು ವಿವರಿಸಿ ನಿಕ್ಕಿಯವರ ಸಹೋದರಿ ಕಾಂಚನ ನೀಡಿದ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 2016ರಲ್ಲಿ ಈ ವಿವಾಹವಾಗಿದ್ದು, ಆಗ ಯಾವುದೇ ವರದಕ್ಷಿಣೆ ನೀಡಿರಲಿಲ್ಲ. ಆದರೆ, ಆ ಬಳಿಕ ಪತಿ ಹಾಗೂ ಅತ್ತೆ-ಮಾವ 35 ಲಕ್ಷ ರೂ. ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬೇಡಿಕೆ ಈಡೇರದೇ ಇದ್ದಾಗ ಕಿರುಕುಳ ಮತ್ತಷ್ಟು ಹೆಚ್ಚಿ ಹಿಂಸೆಯ ರೂಪ ಪಡೆಯಿತು ಎಂದು ಹೇಳಲಾಗಿದೆ.