×
Ad

ಗುಜರಾತ್ | ತಾಲೂಕು ಪಂಚಾಯತ್ ಕಚೇರಿಯಲ್ಲಿ ಘರ್ಷಣೆ: ಆಪ್ ಶಾಸಕ ಚೈತರ್ ವಾಸವ ಬಂಧನ

Update: 2025-07-06 16:15 IST

ಆಪ್ ಶಾಸಕ ಚೈತರ್ ವಾಸವ (Photo: X/@Chaitar_Vasava)

ಅಹ್ಮದಾಬಾದ್ : ಗುಜರಾತ್‌ನ ನರ್ಮದಾ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಮನ್ವಯ ಸಮಿತಿ ಸಭೆಯ ವೇಳೆ ಬಿಜೆಪಿ ನಾಯಕ ಸಂಜಯ್ ವಾಸವ ಹಾಗೂ ಆಪ್ ಶಾಸಕ ಚೈತರ್ ವಾಸವ ನಡುವೆ ಘರ್ಷಣೆ ನಡೆದಿದೆ. ಇದರ ಬೆನ್ನಿಗೆ ಶಾಸಕ ಚೈತರ್ ವಾಸವ ಅವರನ್ನು ಬಂಧಿಸಲಾಗಿದೆ ಎಂದು indianexpress ವರದಿ ಮಾಡಿದೆ.  

ಈ ಕುರಿತು ಪ್ರತಿಕ್ರಿಯಿಸಿದ ನರ್ಮದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಸುಂಬೆ, “ಆಪ್ ಶಾಸಕ ಚೈತರ್ ವಾಸವ ಮತ್ತು ಬಿಜೆಪಿ ನಾಯಕ ಹಾಗೂ ದೆಡಿಯಪಾದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂಜಯ್ ವಾಸವ ಅವರ ನಡುವೆ ಘರ್ಷಣೆ ನಡೆದಿದೆ. ಈ ಸಂಬಂಧ ದೆಡಿಯಪಾದ ಉಪ ವಿಭಾಗಾಧಿಕಾರಿ ಎಸ್.ಡಿ. ಸಂಗದ ವರದಿ ಸಲ್ಲಿಸಿದ್ದಾರೆ. ಸಂಜಯ್ ವಾಸವ ಅವರು ಚೈತರ್ ವಾಸವ ವಿರುದ್ಧ ದೂರು ಸಲ್ಲಿಸಿದ್ದಾರೆ. ದೆಡಿಯಪಾದ ತಾಲೂಕಿನಿಂದ ನಾವು ಚೈತರ್ ವಾಸವರನ್ನು ವಶಕ್ಕೆ ಪಡೆದ ನಂತರ ಅವರನ್ನು ಬಂಧಿಸಿದ್ದೇವೆ”ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಂಜಯ್ ವಾಸವ, ಚೈತರ್ ವಾಸವ ಅವರು ಪಂಚಾಯತ್ ಅಧ್ಯಕ್ಷೆಯೋರ್ವರ ವಿರುದ್ಧ ಅಸಭ್ಯ ಭಾಷೆ ಬಳಸಿದರು ಎಂದು ಆರೋಪಿಸಿದ್ದಾರೆ.

ಪಿಟಿಐ ವರದಿಯ ಪ್ರಕಾರ, ಸ್ಥಳೀಯ ಮಟ್ಟದ ಎಟಿವಿಟಿ ಸಮನಯ್ವಯ ಸಮಿತಿಗೆ ಸದಸ್ಯರಾಗಿ ತಾನು ನಾಮನಿರ್ದೇಶನ ಮಾಡಿರುವ ವ್ಯಕ್ತಿಗಳನ್ನು ಪರಿಗಣಿಸದಿರುವ ಬಗ್ಗೆ ವಾಸವ ಆಕ್ರೋಶಗೊಂಡಿದ್ದರು.

ಇದೇ ವಿಚಾರಕ್ಕೆ ಆಪ್ ಶಾಸಕ ಚೈತರ್ ವಾಸವ್ ಹಾಗೂ ಸಂಜಯ್ ವಾಸವ ಅವರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರೂ ಪರಸ್ಪರ ತಳ್ಳಾಟ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News