ಅಸ್ಸಾಂ | ಪಿವಿಆರ್ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಮೇಲ್ಛಾವಣಿ ಕುಸಿತ : ಮೂವರಿಗೆ ಗಾಯ
Update: 2025-08-04 10:10 IST
Photo | NDTV
ಗುವಾಹಟಿ : ಅಸ್ಸಾಂನ ಗುವಾಹಟಿಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನದ ವೇಳೆ ಸಿನಿಮಾ ಮಂದಿರದ ಮೇಲ್ಛಾವಣಿಯ ಒಂದು ಭಾಗ ಕುಸಿದು ಮಕ್ಕಳು ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
'ಮಹಾವತಾರ ನರಸಿಂಹ' ಚಿತ್ರದ ಪ್ರದರ್ಶನದ ವೇಳೆ ರವಿವಾರ ರಾತ್ರಿ ಈ ಘಟನೆ ಸಂಭವಿಸಿದೆ. ಕಟ್ಟಡದ ಒಂದು ಭಾಗ ಹಠಾತ್ತನೆ ಬಿದ್ದು ಘಟನೆ ಸಂಭವಿಸಿದೆ. ಇದರಿಂದ ಚಿತ್ರಮಂದಿರದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರಪ್ರದರ್ಶನವನ್ನು ನಿಲ್ಲಿಸಿದ ಸಿಬ್ಬಂದಿ ಪ್ರೇಕ್ಷಕರನ್ನು ಸ್ಥಳಾಂತರಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಚಿತ್ರಮಂದಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.