ಬಿಜೆಪಿ ಸಂಸದನ ಪುತ್ರ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಸಹಾಯಕ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದ ಹರ್ಯಾಣ ಸರಕಾರ!
ವಿಕಾಸ್ ಬರಾಲಾ (Photo: X)
ಚಂಡೀಗಢ: ಬಿಜೆಪಿ ರಾಜ್ಯಸಭಾ ಸಂಸದ ಸುಭಾಷ್ ಬರಾಲಾ ಅವರ ಪುತ್ರ, ಎಂಟು ವರ್ಷಗಳ ಹಿಂದೆ ಐಎಎಸ್ ಅಧಿಕಾರಿಯೋರ್ವರ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಎದುರಿಸುತ್ತಿರುವ ವಿಕಾಸ್ ಬರಾಲಾ ಅವರನ್ನು ಹರ್ಯಾಣದಲ್ಲಿ ಸಹಾಯಕ ಅಡ್ವೊಕೇಟ್ ಜನರಲ್(ಎಎಜಿ) ಆಗಿ ನೇಮಿಸಲಾಗಿದೆ.
2017ರ ಪ್ರಕರಣದ ಆರೋಪಿಯಾಗಿರುವ ವಿಕಾಸ್ ಹೆಸರು, ಸಹಾಯಕ ಅಡ್ವೊಕೇಟ್ ಜನರಲ್‌ಗಳು, ಡೆಪ್ಯುಟಿ ಅಡ್ವೊಕೇಟ್ ಜನರಲ್‌ಗಳು, ಹಿರಿಯ ಡೆಪ್ಯುಟಿ ಅಡ್ವೊಕೇಟ್ ಜನರಲ್‌ಗಳು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಹುದ್ದೆಗಳಿಗೆ ಹೊಸದಾಗಿ ನೇಮಿಸಲಾದ 97 ಮಂದಿಯ ಪಟ್ಟಿಯಲ್ಲಿದೆ.
ವಿಕಾಸ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ಚಂಡೀಗಢ ನ್ಯಾಯಾಲಯದಲ್ಲಿ ಈಗಲೂ ವಿಚಾರಣೆಯಲ್ಲಿದೆ ಮತ್ತು ವಿಕಾಸ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಹರ್ಯಾಣ ಕೇಡರ್ ಐಎಎಸ್ ಅಧಿಕಾರಿ ವಿ ಎಸ್ ಕುಂದು ಅವರ ಪುತ್ರಿ ವರ್ಣಿಕಾ ಕುಂದು ಅವರು ವಿಕಾಸ್ ಬರಾಲಾ ಮತ್ತು ಆಶಿಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು. 2017ರ ಆಗಸ್ಟ್ 5ರಂದು ಐಪಿಸಿ ಸೆಕ್ಷನ್ 354 ಡಿ, 341, 365 ಮತ್ತು 511 ಮತ್ತು ಡ್ರಿಂಕ್ ಆಂಡ್ ಡ್ರೈವ್ ಆರೋಪದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 2017ರ ಆಗಸ್ಟ್ 9, ರಂದು ವಿಕಾಸ್ ಮತ್ತು ಆಶಿಶ್ ಅವರನ್ನು ಬಂಧಿಸಲಾಗಿತ್ತು.
ಚಂಡೀಗಢದಲ್ಲಿ ಜೈಲಿನಲ್ಲಿದ್ದ ವಿಕಾಸ್‌ಗೆ 2018ರ ಜನವರಿಯಲ್ಲಿ ಹರ್ಯಾಣ ಹೈಕೋರ್ಟ್ ಜಾಮೀನು ನೀಡಿತ್ತು. ಘಟನೆಯ ಸಮಯದಲ್ಲಿ ವಿಕಾಸ್ ಕಾನೂನು ವಿದ್ಯಾರ್ಥಿಯಾಗಿದ್ದು, 2017ರ ಡಿಸೆಂಬರ್‌ನಲ್ಲಿ ಪದವಿ ಪರೀಕ್ಷೆಗೆ ಹಾಜರಾಗಲು ಹೈಕೋರ್ಟ್ ಆತನಿಗೆ ಅನುಮತಿ ನೀಡಿತ್ತು.
ವರ್ಣಿಕಾ ಅವರ ತಂದೆ ವಿ.ಎಸ್. ಕುಂದು ಈ ಕುರಿತು ಪ್ರತಿಕ್ರಿಯಿಸಿ, ಇದು ನಾನು ಅಥವಾ ನನ್ನ ಮಗಳು ಪ್ರತಿಕ್ರಿಯಿಸಬೇಕಾದ ವಿಷಯವಲ್ಲ. ಅವರು ಯಾವ ರೀತಿಯ ಜನರನ್ನು ನೇಮಿಸುತ್ತಾರೆ ಅಥವಾ ನೇಮಿಸುವುದಿಲ್ಲ ಎಂಬುದನ್ನು ಸರಕಾರ ನೋಡಬೇಕು. ಪ್ರಕರಣ ಇನ್ನೂ ನಡೆಯುತ್ತಿದೆ, ಇದು ದುರದೃಷ್ಟಕರ. ನಾವು ನ್ಯಾಯಾಂಗದ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದೇವೆ. ಆದರೆ ದುರದೃಷ್ಟವಶಾತ್ 7 ವರ್ಷಗಳಾಗಿವೆ ಮತ್ತು ಪ್ರಕರಣದಲ್ಲಿ ಏನೂ ಬೆಳವಣಿಗೆಯಾಗಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮತ್ತು ಹರ್ಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಸಮರ್ಥ ಜನರನ್ನು ಮಾತ್ರ ನೇಮಿಸಬೇಕು ಎಂದು ಹೇಳಿದ್ದಾರೆ.