×
Ad

ಆಸ್ತಿಗಾಗಿ ಮಹಿಳೆಯಿಂದ ತಾಯಿ ಮೇಲೆ ದೌರ್ಜನ್ಯ : ವೀಡಿಯೊ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು

Update: 2025-03-02 11:15 IST

photo | indiatoday

ಚಂಡೀಗಢ : ಹರ್ಯಾಣದ ಹಿಸಾರ್‌ನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆಯೋರ್ವಳು ತನ್ನ ವಯೋವೃದ್ಧ ತಾಯಿಯ ಮೇಲೆ ದೌರ್ಜನ್ಯ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಏನಿದೆ?

ಆಝಾದ್ ನಗರದ ಮಾಡರ್ನ್ ಸಾಕೇತ್ ಕಾಲೋನಿಯಲ್ಲಿ ನಡೆದ ಘಟನೆ ಇದಾಗಿದೆ. ವೀಡಿಯೊದಲ್ಲಿ ಮಹಿಳೆ ತನ್ನ ವಯಸ್ಸಾದ ತಾಯಿಯನ್ನು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ. ಅವರ ದೇಹದ ಮೇಲೆ ಕಚ್ಚಿ ಗಾಯಗೊಳಿಸಿದ್ದಲ್ಲದೆ, ಹಲ್ಲೆ ನಡೆಸುವುದು ಸೆರೆಯಾಗಿದೆ. ʼನೀವು ನನ್ನ ಕೈಯಿಂದ ಸಾಯುತ್ತೀರಿʼ ಎಂದು ಮಹಿಳೆ ತನ್ನ ತಾಯಿಗೆ ಹೇಳುವುದು ವೀಡಿಯೊದಲ್ಲಿ ಸೆರೆಯಾಗಿದೆ. ಕೃತ್ಯವನ್ನು ಎಸಗಿದ ಮಹಿಳೆಯನ್ನು ರೀಟಾ ಎಂದು ಗುರುತಿಸಲಾಗಿದೆ.

ಈ ಕುರಿತು ಸಂತ್ರಸ್ತೆಯ ಪುತ್ರ ಅಮರ್ ದೀಪ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ರೀಟಾ ವಿರುದ್ಧ ಪೊಲೀಸರು ಹಲ್ಲೆ, ಕೊಲೆ ಬೆದರಿಕೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಏನಿದೆ?

ʼನನ್ನ ಸಹೋದರಿ ರೀಟಾಗೆ ಸಂಜಯ್ ಪೂನಿಯಾ ಎಂಬಾತನ ಜೊತೆ ವಿವಾಹ ಮಾಡಿಕೊಡಲಾಗಿದೆ. ಮದುವೆಯ ನಂತರ ಸಹೋದರಿ ಮತ್ತು ಆಕೆಯ ಪತಿ ನನ್ನ ತಾಯಿಯೊಂದಿಗೆ ಹಿಸಾರ್‌ನ ಆಝಾದ್ ನಗರದಲ್ಲಿ ವಾಸ ಮಾಡುತ್ತಿದ್ದರು. ಆಝಾದ್ ನಗರದ ಈ ಮನೆ ತನ್ನ ತಾಯಿಯ ಹೆಸರಿನಲ್ಲಿದೆ. ಈ ವೇಳೆ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಸಹೋದರಿ ಮತ್ತು ಆಕೆಯ ಪತಿ ನನ್ನ ತಾಯಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ರೀಟಾ ಪತಿ ನಿರುದ್ಯೋಗಿಯಾಗಿದ್ದಾರೆ ಅವರು ನನ್ನ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಅವರಿಗೆ ಆಹಾರ ನೀಡಿಲ್ಲ. ಆದ್ದರಿಂದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಅವರನ್ನು ಮನೆಬಿಟ್ಟು ತೆರಳುವಂತೆ ಸೂಚಿಸಬೇಕುʼ ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಆಝಾದ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಸಾಧು ರಾಮ್ ಪ್ರತಿಕ್ರಿಯಿಸಿ, ವಯೋವೃದ್ಧ ಮಹಿಳೆಯ ಮೇಲೆ ಹಲ್ಲೆಯ ವೀಡಿಯೊ ವೈರಲ್ ಆಗಿದೆ. ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News