ಕನಸಿನ ಬದುಕಿನ ರೆಕ್ಕೆ ಕತ್ತರಿಸಿದ ಅಹಮದಾಬಾದ್‌ನ ವಿಮಾನ ದುರಂತ
PC | X
ಅಹಮದಾಬಾದ್ : ಗುಜರಾತ್‌ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಈ ವಿಮಾನದಲ್ಲಿ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುತ್ತಿದ್ದ ಜೀವಗಳು ಬಲಿಯಾಗಿದೆ.
ಈ ಭೀಕರ ವಿಮಾನ ದುರಂತದಲ್ಲಿ ರಾಜಸ್ಥಾನದ ಬನ್ಸ್ವಾರಾ ಮೂಲದ ಕುಟುಂಬವೊಂದು ಬಲಿಯಾಗಿದ್ದು, ಅವರು ವಿಮಾನ ಹಾರಾಟ ಆರಂಭಿಸುವ ಮುನ್ನ ತೆಗೆದ ಸೆಲ್ಫಿಯೊದು ವೈರಲ್ ಆಗುತ್ತಿದೆ. ಪತಿ ಪತ್ನಿ ತಮ್ಮ ಮುದ್ದಾದ ಮೂವರು ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ನೋಡಿದರೆ ಮನಕಲುಕುವಂತಿದೆ.
ಸೆಲ್ಫಿಯಲ್ಲಿರುವ ಪ್ರತೀಕ್ ಜೋಶಿ ಎಂಬವರು ಆರು ವರ್ಷಗಳಿಂ ಲಂಡನ್‌ನಲ್ಲಿ ವಾಸಿಸುತ್ತಿದ್ದರು. ಸಾಫ್ಟ್‌ವೇರ್ ವೃತ್ತಿಪರರಾಗಿದ್ದ ಅವರು, ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಲಂಡನ್ ನಲ್ಲಿ ಬದುಕು ಕಟ್ಟುಕೊಳ್ಳುವ ಕನಸು ಹೊತ್ತಿದ್ದರು. ಕುಟುಂಬದ ಜೊತೆ ಲಂಡನ್ ನಲ್ಲಿ ಜೀವಿಸಲು ವೀಸಾ ಸೇರಿ ಅನುಮತಿಗಳಿಗಾಗಿ ಹಲವು ವರ್ಷಗಳು ಕಾದ ನಂತರ, ಕುಟುಂಬದ ಜೊತೆ ಅವರಿಗೆ ಲಂಡನ್‌ಗೆ ಹೋಗುವ ಅವಕಾಶ ಇತ್ತೀಚಿಗಷ್ಟೇ ಬಂತು. ಅದರಂತೆ ಅವರ ಪತ್ನಿ ಉದಯಪುರದ ಪ್ರಸಿದ್ಧ ವೈದ್ಯೆ ಡಾ.ಕೋಮಿ ವ್ಯಾಸ್ ಎರಡು ದಿನಗಳ ಹಿಂದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು ಕನಸಿನ ಬದುಕಿನ ರೆಕ್ಕೆ ಬಿಚ್ಚಲು ತಯಾರಿ ನಡೆಸಿದ್ದರು.
ಐದು ವರ್ಷದ ಅವಳಿ ಹೆಣ್ಣು ಮಕ್ಕಳು ಸೇರಿದಂತೆ ಐವರು ಲಂಡನ್‌ಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ 171 ಅನ್ನು ಗುರುವಾರ ಹತ್ತಿದರು. ವಿಮಾನದ ಸೀಟಿನಲ್ಲಿ ಕುಳಿತು ಬಳಿಕ ಸೆಲ್ಫಿ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳುಹಿಸಿ ಸಂಭ್ರಮ ಪಟ್ಟಿದ್ದರು. ಆದರೆ ಆ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ವಿಮಾನವೇರಿದ ಕೆಲವೇ ಕ್ಷಣಗಳಲ್ಲಿ ವಿಮಾನವು ತಾಂತ್ರಿಕ ದೋಷದಿಂದ ಜನನಿಬಿಡ ಪ್ರದೇಶದಲ್ಲಿ ಪತನವಾಯಿತು. ಪ್ರತೀಕ್ ಜೋಶಿ ಕುಟುಂಬ ಕಂಡ ಕನಸುಗಳೆಲ್ಲವೂ ಕ್ಷಣಮಾತ್ರದಲ್ಲಿ ನುಚ್ಚು ನೂರಾಯಿತು. ಸಣ್ಣ ಮಕ್ಕಳು ಸೇರಿಂದತೆ, ಕುಟುಂಬದ ಯಾವುದೇ ಸದಸ್ಯರೂ ಘಟನೆಯಲ್ಲಿ ಬದುಕುಳಿದಿಲ್ಲ. ಅವರು ತೆಗೆದ ಕೊನೆಯ ಸೆಲ್ಫಿ ಮಾತ್ರ ಎಲ್ಲದೆ ಹರಿದಾಡುತ್ತಿದೆ.