×
Ad

ವಯನಾಡ್: ಚೂರಲ್‌ಮಲ ಪ್ರದೇಶದಲ್ಲಿ ಭಾರೀ ಮಳೆ; ಮತ್ತೆ ಪ್ರವಾಹ ಭೀತಿ

Update: 2025-06-25 13:46 IST

Screengrab:X/@KP_Aashish

ಕಲ್ಪಟ್ಟ: ವಯನಾಡಿನ ಚೂರಲ್‌ಮಲ ಪ್ರದೇಶದಲ್ಲಿ ಭಾರಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇದರೊಂದಿಗೆ ಪುನ್ನಪ್ಪುಝ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಗ್ರಾಮದ ರಸ್ತೆಗಳು ಜಲಾವೃತವಾಗಿದೆ. ಮಂಗಳವಾರ ಸಂಜೆಯಿಂದ ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಯನಾಡಿನ ಮುಂಡಕ್ಕೈ-ಚೂರಲ್ಮಲ ಪ್ರದೇಶದಲ್ಲಿ ಮತ್ತೆ ಪ್ರವಾಹ ಮತ್ತು ಭೂಕುಸಿತ ಸಂಭವಿಸುವ ಭೀತಿ ಉಂಟಾಗಿದೆ ಎಂದು ವರದಿಯಾಗಿದೆ.

2024 ಜುಲೈ 30, ರಂದು ಕೇರಳವನ್ನು ಬೆಚ್ಚಿಬೀಳಿಸಿದ್ದ ವಯನಾಡ್ ಮುಂಡಕ್ಕೈ ಭೂಕುಸಿತವುಟಾದ ಪ್ರದೇಶದ ನದಿಯಲ್ಲಿ ಭಾರಿ ಪ್ರಮಾಣದ ಕೆಸರು ಮಿಶ್ರಿತ ನೀರಿನ ಹರಿವು ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿಸಿದೆ.

ಭೂಕುಸಿತದ ನಂತರ, ನದಿಗೆ ಅಡ್ಡಲಾಗಿ ಸೇನೆಯು ಸ್ಥಾಪಿಸಿದ್ದ ಬೈಲಿ ಸೇತುವೆಯ ಬಳಿಯ ಮುಂಡಕೈ ರಸ್ತೆ ಕೂಡ ಜಲಾವೃತಗೊಂಡಿದೆ.

ಚೂರಲ್‌ಮಲ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ನವೀಕರಣ ಕಾರ್ಯಕ್ಕಾಗಿ ಎರಡೂ ನದಿ ದಂಡೆಗಳಲ್ಲಿ ಸಂಗ್ರಹಿಸಲಾದ ಮಣ್ಣು ಕೊಚ್ಚಿಹೋಗಿದ್ದು, ಆಟ್ಟಮಲ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಹರಿಯುತ್ತಿದೆ.

ವೆಳ್ಳರಿಮಲದಲ್ಲಿ ಭೂಕುಸಿತ ಸಂಭವಿಸಿರುವ ಬಗ್ಗೆ ಸ್ಥಳೀಯರು ಹೇಳುತ್ತಿದ್ದು, ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ತಿಳಿಸಿದೆ.

Full View

ನೀರಿನ ಮಟ್ಟ ಹೆಚ್ಚಿ ಧುಮ್ಮಿಕ್ಕುತ್ತಿರುವ ವೆಳ್ಳರಿಮಲದಲ್ಲಿರುವ ಸೂಜಿಪ್ಪಾರ ಜಲಪಾತ 

ಕಬನಿ ನದಿ ಹರಿಯುವ ಮಾನಂದವಾಡಿ ಮತ್ತು ಪನಮರಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬಾಣಾಸುರ ಅಣೆಕಟ್ಟು ಪೂರ್ಣ ಸಾಮರ್ಥ್ಯವನ್ನು ತಲುಪಿರುವುದರಿಂದ, ಹತ್ತಿರದ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡ್ ಸೇರಿದಂತೆ 11 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮುಂದಿನ ಮೂರು ಗಂಟೆಗಳಲ್ಲಿ ಸಾಧಾರಣ ಮಳೆ ಮತ್ತು ಗಂಟೆಗೆ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಎಚ್ಚರಿಕೆ ನೀಡಿದೆ.

ಈ ಪ್ರದೇಶದಲ್ಲಿ ಇನ್ನೂ ಭೂಕುಸಿತದ ಸಾಧ್ಯತೆಯಿದೆ ಮತ್ತು ಜನರನ್ನು ಆದಷ್ಟು ಬೇಗ ಸ್ಥಳಾಂತರಿಸದಿದ್ದರೆ, ಅವರು ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಚೂರಲ್ ಮಲ ಆಕ್ಷನ್ ಕೌನ್ಸಿಲ್ ಅಧಿಕಾರಿ ಶಾಜಿಮೋನ್ ಹೇಳಿದರು.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು ತಲುಪಿದ್ದಾರೆ. ಪುಂಜಿರಿಮಟ್ಟಂ ಮತ್ತು ಮುಂಡಕೈನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಸ್ಥಳೀಯ ಶಾಸಕ ಟಿ. ಸಿದ್ದೀಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News