ಪಹಲ್ಗಾಮ್ ಭಯೋತ್ಪಾದಕ ದಾಳಿ ವೇಳೆ ಪರಾರಿಯಾಗಲು ಪ್ರಯತ್ನಿಸದೆ ಪ್ರವಾಸಿಗಳ ರಕ್ಷಣೆಗೆ ಮುಂದಾದ ಹದಿಹರೆಯದ ಸೋದರಿಯರು!
ಪಹಲ್ಗಾಮ್: ಜಮ್ಮುಕಾಶ್ಮೀರದ ಪಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾಲಿನ ಎತ್ತರದ ಪ್ರದೇಶದಲ್ಲಿಯ ಮುರುಕಲು ಮಣ್ಣಿನ ಮನೆಯು ಅಚಲ ಧೈರ್ಯದ ಸಂಕೇತವಾಗಿ ನಿಂತಿದೆ. ಹುಲ್ಲುಗಾವಲಿನಲ್ಲಿ ಪ್ರವಾಸಿಗಳ ಮೇಲೆ ಭಯೋತ್ಪಾದಕರ ಗುಂಡಿನ ದಾಳಿ ನಡೆಯುತ್ತಿದ್ದಾಗ ಈ ಮನೆಯ ಇಬ್ಬರು ಹದಿಹರೆಯದ ಸೋದರಿಯರು ತಪ್ಪಿಸಿಕೊಳ್ಳಲು ಪ್ರಯತ್ನಿಸದೆ ಪ್ರವಾಸಿಗಳ ರಕ್ಷಣೆಗೆ ಮುಂದಾಗಿದ್ದರು.
ಗುಜ್ಜರ್-ಬಕರ್ವಾಲ್ ಸಮುದಾಯದ ರುಬೀನಾ(14) ಮತ್ತು ಮಮ್ತಾಝ್(16) ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅನಿರೀಕ್ಷಿತ ರಕ್ಷಕರಾಗಿ ಮೂಡಿ ಬಂದಿದ್ದರು. ಈ ದಾಳಿಯಲ್ಲಿ 26 ಜನರು ಕೊಲ್ಲಲ್ಪಟ್ಟಿದ್ದಾರೆ.
ಭಯೋತ್ಪಾದಕರು ದಿಢೀರನೆ ಕಾಣಿಸಿಕೊಂಡಾಗ ಪ್ರದೇಶದಲ್ಲಿ ಭೀತಿ ಆವರಿಸಿತ್ತು. ಪ್ರವಾಸಿಗರು ಭಯದಿಂದ ದಿಕ್ಕಾಪಾಲಾಗಿ ಚದುರಿದ್ದರು. ಇಂತಹ ಸಂದರ್ಭದಲ್ಲಿ ಈ ಸಹೋದರಿಯರು ಪಲಾಯನ ಮಾಡದಿರಲು ನಿರ್ಧರಿಸಿದ್ದರು.
ಪಾದದ ಮೂಳೆ ಮುರಿದಿದ್ದರೂ ಅದನ್ನು ಲೆಕ್ಕಿಸದೆ ಮಮ್ತಾಝ್ ಪ್ರವಾಸಿಗಳ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಹೊತ್ತೊಯ್ದಿದ್ದಳು. ಸೋದರಿಯರಿಬ್ಬರೂ ಸೇರಿಕೊಂಡು ಚೆನ್ನೈನ ದಂಪತಿಯನ್ನು ರಕ್ಷಿಸಿದ್ದರು ಮತ್ತು ಇತರ ಅನೇಕರು ಕಲ್ಲುಬಂಡೆಗಳ ಮಾರ್ಗದ ನಡುವೆ ಸುರಕ್ಷಿತ ಸ್ಥಳಕ್ಕೆ ತೆರಳಲು ನೆರವಾಗಿದ್ದರು. ಅವರಿಗೆಲ್ಲ ತಮ್ಮ ಮನೆಯಲ್ಲಿ ಆಶ್ರಯ ಮತ್ತು ನೀರು ನೀಡಿದ್ದರು, ಅವರಲ್ಲಿ ಭರವಸೆಯನ್ನು ಮೂಡಿಸಿದ್ದರು.
‘ಆ ಸಮಯದಲ್ಲಿ ನಾವು ನಮ್ಮ ಬಗ್ಗೆ ಯೋಚಿಸಿರಲಿಲ್ಲ’ ಎಂದು ‘ಕಾಶ್ಮೀರದ ಮೊಲದ ಹುಡುಗಿ’ಎಂದೇ ಹೆಸರಾಗಿರುವ ರುಬೀನಾ ಹೇಳಿದಳು. ರುಬೀನಾ ಪ್ರವಾಸಿಗಳಿಂದ ಕೆಲವು ರೂಪಾಯಿಗಳನ್ನು ಪಡೆದುಕೊಂಡು ತನ್ನ ಮುದ್ದಿನ ಮೊಲದೊಂದಿಗೆ ಚಿತ್ರಗಳನ್ನು ತೆಗೆಸಿಕೊಳ್ಳಲು ಅವರಿಗೆ ಅವಕಾಶ ನೀಡುತ್ತಾಳೆ.
‘ನಾವು ಪ್ರವಾಸಿಗಳ ಬಗ್ಗೆ ಮಾತ್ರ ಯೋಚಿಸಿದ್ದೆವು. ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ,ಅವರು ಭಯಭೀತರಾಗಿದ್ದರು. ಅವರು ಕೇಳಿದ್ದು ನೆರವು ಮಾತ್ರ’ ಎಂದು ಹೇಳಿದ ರುಬೀನಾ,‘ನಮ್ಮ ಮಣ್ಣಿನ ಮನೆಯಲ್ಲಿ ನಾವು ಅವರಿಗೆ ನೀರು ನೀಡಿದೆವು. ನಾವು ಮೂರು ಸಲ ದಾಳಿ ಸ್ಥಳಕ್ಕೆ ತೆರಳಿದ್ದೆವು. ಪ್ರತಿ ಸಲವೂ ಹೆಚ್ಚು ಜನರು ಓಡುತ್ತಿದ್ದನ್ನು, ಹೆಚ್ಚು ಜನರು ನೆರವಿಗಾಗಿ ಯಾಚಿಸುತ್ತಿರುವುದನ್ನು ನೋಡಿದ್ದೆವು’ ಎಂದಳು.
ಬೈಸರನ್ ಇಕೋ ಪಾರ್ಕ್‌ನಲ್ಲಿ ಮಾರ್ಗದರ್ಶಿ ಮತ್ತು ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ರುಬೀನಾ ದಾಳಿ ಆರಂಭಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಚೆನ್ನೈನ ದಂಪತಿಯನ್ನು ಕರೆ ತಂದಿದ್ದಳು.